ಪ್ರಯಾಗರಾಜ್ (ಉತ್ತರ ಪ್ರದೇಶ) : ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ನಿರ್ಮಿಸಲಾದ 76 ಕೈಗೆಟುಕುವ ದರದ ಮನೆಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಫಲಾನುಭವಿಗಳಿಗೆ ಶುಕ್ರವಾರ ಹಸ್ತಾಂತರಿಸಿದರು. ಪ್ರಯಾಗ್‌ರಾಜ್‌ನಲ್ಲಿ ಹತ್ಯೆಗೀಡಾದ ಗ್ಯಾಂಗ್ಸ್ಟರ್ ಅತೀಕ್ ಅಹಮದ್‌ನಿಂದ ವಶಪಡಿಸಿಕೊಳ್ಳಲಾದ ಜಮೀನಿನಲ್ಲಿ ಈ ಮನೆಗಳನ್ನು ನಿರ್ಮಿಸಲಾಗಿದೆ.
ಫಲಾನುಭವಿಗಳಿಗೆ ಹಸ್ತಾಂತರಿಸಿದ ಫ್ಲ್ಯಾಟ್‌ಗಳ ಸ್ಥಳದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮಕ್ಕಳೊಂದಿಗೆ ಸಂವಾದ ನಡೆಸಿದರು. ಬಡವರಿಗಾಗಿ ಕಟ್ಟಲಾದ ಫ್ಲ್ಯಾಟ್‌ಗಳನ್ನು ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಫಲಾನುಭವಿಯೊಬ್ಬರು, "ತುಂಬಾ ಅದ್ಭುತ ಅನುಭವ. ನನಗೆ ನನ್ನ ಸ್ವಂತ ಮನೆ ಸಿಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಈಗ ಯಾರೂ ನನ್ನನ್ನು ಇಲ್ಲಿಂದ ಹೊರ ಹೋಗುವಂತೆ ಹೇಳುವಂತಿಲ್ಲ..." ಎಂದು ಸಂತಸ ಹಂಚಿಕೊಂಡರು.
41 ಚದರ ಮೀಟರ್‌ನಲ್ಲಿ ನಿರ್ಮಾಣವಾದ ಫ್ಲ್ಯಾಟ್‌ಗೆ 3.5 ಲಕ್ಷ ರೂಪಾಯಿ ಮತ್ತು ಎರಡು ಕೊಠಡಿ, ಅಡುಗೆ ಕೋಣೆ, ಶೌಚಾಲಯದ ಸೌಲಭ್ಯವಿರುವ ಫ್ಲ್ಯಾಟ್‌ಗೆ 6 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಕೊಲೆಯಾದ ಗ್ಯಾಂಗ್ಸ್ಟರ್ ಕಮ್ ರಾಜಕಾರಣಿ ಅತೀಕ್ ಅಹ್ಮದ್ ಅವನಿಂದ ವಶಪಡಿಸಿಕೊಂಡ ಭೂಮಿಯಲ್ಲಿ ಬಡವರಿಗಾಗಿ ನಿರ್ಮಿಸಲಾದ 76 ಫ್ಲ್ಯಾಟ್‌ಗಳನ್ನು ಜೂನ್ 9 ರಂದು ಲಾಟರಿ ಮೂಲಕ ಹಂಚಿಕೆ ಮಾಡಲಾಗಿತ್ತು.
ಅಲಹಾಬಾದ್ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಫ್ಲ್ಯಾಟ್ ಹಂಚಿಕೆಯ ಲಾಟರಿ ಡ್ರಾ ನಡೆಸಲಾಗಿತ್ತು. 6,030 ಅರ್ಜಿದಾರರ ಪರಿಶೀಲನೆಯ ನಂತರ 1,590 ಅರ್ಜಿಗಳನ್ನು ಲಾಟರಿಗೆ ಪರಿಗಣಿಸಲಾಗಿತ್ತು ಎಂದು ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರದ (ಪಿಡಿಎ) ಉಪಾಧ್ಯಕ್ಷ ಅರವಿಂದ್ ಕುಮಾರ್ ಚೌಹಾಣ್ ಹೇಳಿದ್ದಾರೆ. ಸಿಎಂ ಯೋಗಿ ಅವರು ಡಿಸೆಂಬರ್ 26, 2021 ರಂದು ಪ್ರಯಾಗ್‌ರಾಜ್‌ನ ಲುಕರ್‌ಗಂಜ್ ಪ್ರದೇಶದಲ್ಲಿ ಅತೀಕ್ ವಶದಿಂದ ವಶಪಡಿಸಿಕೊಂಡ 1,731 ಚದರ ಮೀಟರ್ ಭೂಮಿಯಲ್ಲಿ ಈ ಕೈಗೆಟುಕುವ ವಸತಿ ಯೋಜನೆಗೆ ಅಡಿಗಲ್ಲು ಹಾಕಿದ್ದರು.
ಈ ಯೋಜನೆಯ ಕಾಮಗಾರಿಯನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು (DUDA) ಕೈಗೆತ್ತಿಕೊಂಡಿದ್ದು, ಎರಡು ಬ್ಲಾಕ್‌ಗಳಲ್ಲಿ 76 ಫ್ಲಾಟ್‌ಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತೀಕ್ ಅಹ್ಮದ್ 2005 ರಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದರು ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅವರ ಹತ್ಯೆ ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದರು.
ಅತೀಕ್ ಅಹ್ಮದ್ ಮತ್ತು ಅವನ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಈ ವರ್ಷದ ಏಪ್ರಿಲ್ 15 ರಂದು ರಾತ್ರಿ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದಾಗ ಪತ್ರಕರ್ತರ ವೇಷದಲ್ಲಿ ಬಂದಿದ್ದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
ಇದನ್ನೂ ಓದಿ : ಮೆಟ್ರೋ ರೈಲಿನಲ್ಲಿ 2 ಬಾಟಲಿ ಮದ್ಯ ಕೊಂಡೊಯ್ಯಲು ಅನುಮತಿ: ಆದರೆ ಒಳಗೆ ಕುಡಿಯುವಂತಿಲ್ಲ!