ಮಹಾರಾಷ್ಟ್ರದ ಭಂಡಾರಾ ಜಿಲ್ಲಾಸ್ಪತ್ರೆಯು ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾಗಿದೆ. ಆಸ್ಪತ್ರೆಯಲ್ಲಿನ ನವಜಾತ ಶಿಶು ವಿಭಾಗದಲ್ಲಿ 3 ತಿಂಗಳುಗಳ ಸುಮಾರು 10 ಶಿಶುಗಳು ಶನಿವಾರ ಸಾವನ್ನಪ್ಪಿವೆ. ಈ ಯೂನಿಟ್‌ನಿಂದ ಕೇವಲ 7 ಶಿಶುಗಳನ್ನು ರಕ್ಷಿಸಲು ಅಗ್ನಿ ಶಾಮಕ ದಳಕ್ಕೆ ಸಾಧ್ಯವಾಗಿದೆ.
ಮೂರು ಶಿಶುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಸಾವನ್ನಪ್ಪಿದರೆ, ಉಳಿದ 7 ಶಿಶುಗಳು ಹೊಗೆಯಿಂದ ಉಸಿರುಕಟ್ಟಿ ಸಾವನ್ನಪ್ಪಿವೆ. ಈ ಎಲ್ಲ ನವಜಾತ ಶಿಶುಗಳನ್ನೂ ಅನಾರೋಗ್ಯದಿಂದಾಗಿಯೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಕೊಲ್ಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿನ ಇಂಟೆನ್ಸಿವ್ ಕೇರ್ ಯೂನಿಟ್‌ನಲ್ಲಿ ಅಗ್ನಿ ಅನಾಹುತದಿಂದಾಗಿ ಮೂವರು ಮಕ್ಕಳು ಸಾವನ್ನಪ್ಪಿದ ಘಟನೆಯನ್ನು ಇದು ನೆನಪಿಸುತ್ತದೆ.
ಇದೇ ರೀತಿ, ಆಗಸ್ಟ್‌ನಲ್ಲಿ ಅಹಮದಾಬಾದ್‌ನ ಶ್ರೇಯಾ ಆಸ್ಪತ್ರೆಯಲ್ಲಿ ಕೊರೊನಾ ಐಸಿಯು ವಾರ್ಡ್‌ನಲ್ಲಿ ಅಗ್ನಿ ಅನಾಹುತದಿಂದಾಗಿ ಎಂಟು ಜನರು ಸಾವನ್ನಪ್ಪಿದ್ದರು. ಸುಮಾರು ಇದೇ ಸಮಯದಲ್ಲಿ ವಿಜಯವಾಡದ ಸ್ವರ್ಣ ಪ್ಯಾಲೇಸ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದರು. ನವೆಂಬರ್‌ನ ಕೊನೆಯ ವಾರದಲ್ಲಿ ಗುಜರಾತ್‌ನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಐವರು ಸಾವನ್ನಪ್ಪಿದ್ದರು.
ದೇಶದಲ್ಲಿನ ಆಸ್ಪತ್ರೆಗಳ ಆಘಾತಕಾರಿ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ದೇಶದಲ್ಲಿನ ಆಸ್ಪತ್ರೆಗಳ ಸುರಕ್ಷತಾ ಆಡಿಟ್ ನಡೆಸುವಂತೆ ಸೂಚಿಸಿದೆ. ಕೋವಿಡ್ -19 ಕೇರ್ ಸೆಂಟರ್‌ಗಳಲ್ಲಿ ಅಗ್ನಿ ಸುರಕ್ಷತೆಯ ಆಡಿಟ್ ನಡೆಸಲು ಪ್ರತಿ ಆಸ್ಪತ್ರೆಯಲ್ಲಿ ನೋಡಲ್ ಅಧಿಕಾರಿ ನೇಮಿಸುವಂತೆ ಮತ್ತು ವಿಶೇಷ ಜಿಲ್ಲಾ ಸಮಿತಿಯನ್ನು ರಚಿಸುವಂತೆಯೂ ಕೋರ್ಟ್ ಸೂಚಿಸಿದೆ.
ಅಗ್ನಿಶಾಮಕ ದಳದಿಂದ ಯಾವುದೇ ಅನುಮತಿ ಇಲ್ಲದೆಯೇ ನೂರಾರು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸುರಕ್ಷತಾ ನಿಯಮಗಳ ಕುರಿತು ದಿವ್ಯ ನಿರ್ಲಕ್ಷ್ಯ ಮತ್ತು ಹೊಣೆಗಾರಿಕೆ ಇಲ್ಲದಂತೆ ಆಸ್ಪತ್ರೆಗಳು ಕಾರ್ಯನಿರ್ವಹಿಸುವುದರಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ.
ಎನ್‌ಸಿಆರ್‌ಬಿ ಡೇಟಾ ಪ್ರಕಾರ, 2019ರಲ್ಲಿ ದೇಶದಲ್ಲಿ 11,037 ಅಗ್ನಿ ಅನಾಹುತ ಸಂಭವಿಸಿವೆ. ಇದರಲ್ಲಿ ಒಟ್ಟು 10,915 ಜೀವಗಳು ಬೆಲೆತೆತ್ತಿವೆ. ಮುಂದುವರಿದ ದೇಶಗಳು ಜಾಗೃತಿ ಮೂಡಿಸುವ ಮೂಲಕ ಮತ್ತು ತಂತ್ರಜ್ಞಾನಗಳ ಸಹಾಯದಿಂದ ಅಗ್ನಿ ಅನಾಹುತವನ್ನು ತಡೆಯುತ್ತಿವೆ.
ನಮ್ಮ ದೇಶದಲ್ಲಿ ಪ್ರಾಯೋಗಿಕವಾಗಿ ಅಗ್ನಿ ಶಾಮಕ ಸೇವೆಗಳು ಅತ್ಯಂತ ಶೋಚನೀಯವಾಗಿವೆ. ಅಗ್ನಿ ಅನಾಹುತ ತಡೆಯುವ ನಿಯಮಗಳನ್ನು ಕಟ್ಟುನಿಟ್ಟಾಗಿ ಆಸ್ಪತ್ರೆಗಳು ಅನುಸರಿಸದೇ ಇರುವುದರಿಂದ, ಅವು ಅಪಾಯಕ್ಕೆ ನಿರಂತರವಾಗಿ ಆಹ್ವಾನ ನೀಡುತ್ತಲೇ ಇವೆ. 2010ರಿಂದ 2019ರವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ, ದೇಶದಾದ್ಯಂತ 33 ಆಸ್ಪತ್ರೆಗಳಲ್ಲಿ ಅಗ್ನಿ ಅನಾಹುತ ಸಂಭವಿಸಿವೆ.
2011ರಲ್ಲಿ ದಕ್ಷಿಣ ಕೋಲ್ಕತಾದಲ್ಲಿನ ಎಎಂಆರ್‌ಐ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಗರಿಷ್ಠ 95 ಜನರು ಸಾವನ್ನಪ್ಪಿದ್ದರು. ಇದೇ ರೀತಿಯ ಘಟನೆ ಭುವನೇಶ್ವರದ ಬಳಿಯಲ್ಲಿನ ಸ್ಯಾಮ್ ಆಸ್ಪತ್ರೆಯಲ್ಲಿ 2016ರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ್ದು, 23 ಜನರು ಸಾವನ್ನಪ್ಪಿದ್ದರು.
2014ರಲ್ಲಿ ಆಸ್ಪತ್ರೆಗಳಲ್ಲಿ ಅಗ್ನಿ ಅನಾಹುತವನ್ನು ತಪ್ಪಿಸುವುದು ಹೇಗೆ ಎಂಬ ಬಗ್ಗೆ ವಿವರವಾದ ಮಾರ್ಗಸೂಚಿಗಳನ್ನು ವಿಶ್ವ ಆರೋಗ್ಯ ಸಂಘಟನೆಯು ಪ್ರಕಟಿಸಿದೆ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ರೋಗಿಗಳನ್ನು ಸ್ಥಳಾಂತರ ಮಾಡಬೇಕು ಮತ್ತು ಅಗ್ನಿಯನ್ನು ತಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದು ವರದಿಯಲ್ಲಿ ವಿವರಿಸಲಾಗಿದೆ. ಅಗ್ನಿ ಅನಾಹುತವನ್ನು ತಡೆಯಲು ಸ್ಮೋಕ್ ಡಿಟೆಕ್ಟರುಗಳು ಮತ್ತು ವಾಟರ್ ಸ್ಪ್ರಿಂಕ್ಲರ್‌ಗಳು ಅತ್ಯಂತ ಅಗತ್ಯದ್ದಾಗಿದೆ.
ಭಂಡಾರ ಜಿಲ್ಲಾಸ್ಪತ್ರೆಯಲ್ಲಿ ಈ ಮೂಲಸೌಲಭ್ಯವೂ ಇರಲಿಲ್ಲ. ಇಂತಹ ಘಟನೆ ಮರುಕಳಿಸುವುದನ್ನು ತಪ್ಪಿಸಲು, ಸಮಗ್ರ ಅಗ್ನಿ ಶಾಮಕ ತಡೆ ಕ್ರಮವನ್ನು ಜಾರಿಗೊಳಿಸುವ ಮೂಲಕ ಅಗ್ನಿ ಶಾಮಕ ಪರೀಕ್ಷೆಯಲ್ಲಿ ಎಲ್ಲ ಆಸ್ಪತ್ರೆಗಳು ಉತ್ತೀರ್ಣವಾಗಬೇಕು.
ಆಧುನಿಕ ತಂತ್ರಜ್ಞಾನ ಸಲಕರಣೆಗಳನ್ನು ಅಳವಡಿಸಿಕೊಳ್ಳುವುದು ಮತ್ತು ಅವುಗಳನ್ನು ಬಳಸುವ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡುವ ಮೂಲಕ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತೆಯನ್ನು ಜಾರಿಗೊಳಿಸಲು ಸಾಧ್ಯವಿದೆ.