ಕಿನ್ನೌರ್: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಜುಲೈ 25 ರಂದು ಸಂಭವಿಸಿದ ಭೂಕುಸಿತದಲ್ಲಿ ಒಂಬತ್ತು ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ, ಈ ಅಪಘಾತದಲ್ಲಿ ಇನ್ನೂ ಅನೇಕ ಪ್ರವಾಸಿಗರು ಗಾಯಗೊಂಡಿದ್ದಾರೆ. ಈ ಘಟನೆ ನಡೆದ ವೇಳೆ ಸ್ಥಳದಲ್ಲಿ ಇಬ್ಬರು ಪ್ರವಾಸಿಗರಾದ ನವೀನ್ ಮತ್ತು ಶೆರಿಲ್ ಒಬೆರಾಯ್ ಸಹ ಇದ್ದರು.
ಇವರಿಬ್ಬರು ಕಾರಿನಲ್ಲಿದ್ದಾಗ ಭೂಕುಸಿತ ಸಂಭವಿಸಿದೆ. ಈ ವೇಳೆ ಕಾರಿನಿಂದ ಹೊರ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ನವೀನ್ ಈ ಅಪಘಾತದ ದೃಶ್ಯವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.
ಈ ಇಬ್ಬರು ಚಿಟ್ಕುಲ್ನಿಂದ ಹಿಂದಿರುಗುವಾಗ, ಸಾಂಗ್ಲಾ - ಚಿಟ್ಕುಲ್ ರಸ್ತೆಯ ಬಟ್ಸೆರಿ ಬಳಿ ಭೂಕುಸಿತ ಸಂಭವಿಸಿದೆ. ಜಿಲ್ಲಾಡಳಿತದ ಪ್ರಕಾರ, ಇವರಿಬ್ಬರೂ ಇದೀಗ ಸುರಕ್ಷಿತವಾಗಿದ್ದಾರೆ. ಅಗತ್ಯ ಚಿಕಿತ್ಸೆಯ ನಂತರ, ಇಬ್ಬರನ್ನೂ ಅವರ ಸ್ಥಳಗಳಿಗೆ ಕಳುಹಿಸಲಾಗಿದೆ.
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಬಟ್ಸೆರಿಯಲ್ಲಿ ದೊಡ್ಡ ದೊಡ್ಡ ಬಂಡೆಗಲ್ಲುಗಳು ಪರ್ವತದಿಂದ ಉರುಳಿಬಿದ್ದ ಪರಿಣಾಮ ಒಂಬತ್ತು ಜನ ಪ್ರಾಣ ಕಳೆದುಕೊಂಡಿದ್ದರು. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು.
ಇದನ್ನೂ ಓದಿ: ಭೂಕುಸಿತದ ಭಯಾನಕ ವಿಡಿಯೋ: ಪರ್ವತದಿಂದ ಉರುಳಿದ ಬಂಡೆಗಳಿಗೆ 9 ಪ್ರವಾಸಿಗರು ಬಲಿ