ಚಂಡೀಗಢ: ಕೊರೊನಾ ಕಾಲದಲ್ಲಿ ಆರೋಗ್ಯ ಕಾರ್ಯಕರ್ತರು ಹಗಲು ರಾತ್ರಿ ಎನ್ನದೇ ರೋಗಿಗಳ ಸೇವೆ ಮಾಡುತ್ತಿದ್ದಾರೆ. ಜೊತೆ ಜೊತೆಗೆ ಮನೆಯನ್ನೂ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಕೆಲವು ಕಾರ್ಯಕರ್ತರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂತಹ ಕಠಿಣ ಸಮಯದಲ್ಲೂ ಪರಿಸರ ಕಾಳಜಿಯಂತಹ ಕಾರ್ಯದಲ್ಲಿ ತೊಡಗಿದ್ದಾರೆ. ಇಂತಹವರ ಸಾಲಿನಲ್ಲೀಗ ಚಂಡೀಗಢದ ಸರ್ಕಾರಿ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ಸಪ್ನಾ ಚೌಧರಿ ಸಹ ಸೇರಿದ್ದಾರೆ.
ಲಾಕ್ಡೌನ್ ಹಾಗೂ ಕೊರೊನಾ ನಡುವೆ ಮನೆಯಲ್ಲಿದ್ದ ಕಸವನ್ನೆಲ್ಲ ಒಂದೆಡೆ ಸೇರಿಸಿ ಅದರಿಂದ ಕಲಾಕೃತಿಗಳ ರಚಿಸಲು ಮುಂದಾಗಿದ್ದಾರೆ. ಮನೆಯಲ್ಲಿದ್ದ ಖಾಲಿ ಡಬ್ಬಗಳ ಸೇರಿಸಿ ಅವುಗಳಿಗೆ ಬಣ್ಣ ಬಳಿದು ಗಿಡನೆಡುವ ಮಡಿಕೆಯನ್ನಾಗಿ ಪರಿವರ್ತಿಸಿದ್ದಾರೆ.
ವಿಶೇಷ ಎಂದರೆ ಈ ಮಡಕೆಗಳನ್ನು ಕೇವಲ ಮನೆಯಲ್ಲಿ ಬಳಕೆಯಾಗದ ವಸ್ತುಗಳಿಂದ ಮಾಡಲಾಗಿದೆ. ಅವುಗಳಿಗೆ ಬಣ್ಣ ಬಳಿದು ನಂತರ ವಿವಿಧ ಪ್ರಾಣಿಗಳ ರೂಪ ನೀಡಲಾಗುತ್ತದೆ. ಈ ಕಾರ್ಯ ಕೇವಲ ಒಂದೆರಡು ದಿನದಲ್ಲಿ ಮಾಡಿ ಮುಗಿಸಿರುವುದಲ್ಲ. ಬದಲಾಗಿ ಅಲಂಕಾರಿಕ ವನ ನಿರ್ಮಾಣಕ್ಕೆ ಸುಮಾರು 8 ತಿಂಗಳ ಕಾಲ ಸಮಯ ತೆಗೆದುಕೊಂಡಿದ್ದರಂತೆ.
ಚೌಧರಿ ಮನೆಯಲ್ಲಿ ಗಿಡ ನೆಡಲು ಮಾತ್ರ ನಿರ್ಧರಿಸಿದ್ದರು. ಆದರೆ, ಮಾರುಕಟ್ಟೆಯಲ್ಲಿ ಫ್ಲವರ್ ಪಾಟ್ಗಳ ಬೆಲೆ ದುಬಾರಿಯಾಗಿತ್ತು. ಇದರಿಂದ ಮನೆಯಲ್ಲಿನ ಹಳೆಯ ಖಾಲಿ ಡಬ್ಬಗಳ ಬಳಸಿ ಫ್ಲವರ್ ಪಾಟ್ ನಿರ್ಮಿಸಲು ನಿರ್ಧರಿಸಿದರು. ಅದರಂತೆ ಮೂಲೆ ಮೂಲೆ ಹುಡುಕಾಡಿ ಹಳೆಯ ಕ್ಯಾನ್ಗಳಿಗೆ ಬಣ್ಣ ಹಚ್ಚಿ ಅಲಂಕಾರಿಕ ವಸ್ತುವಾಗಿ ಮಾರ್ಪಡಿಸಿದ್ದಾರೆ.
ಸಪ್ನಾ ಚೌಧರಿಯ ಈ ಕಾರ್ಯದಿಂದ ಪರಿಸರ ಮೇಲಾಗುತ್ತಿದ್ದ ಒಂದಿಷ್ಟು ಹಾನಿ ತಡೆದಂತಾಗಿದೆ. ಮನೆಯಲ್ಲಿದ್ದ ಖಾಲಿ ಪ್ಲಾಸ್ಟಿಕ್ ವಸ್ತುಗಳ ತ್ಯಾಜ್ಯವಾಗಿ ಎಸೆಯುವ ಬದಲಾಗಿ ಈ ರೀತಿ ಸದ್ಬಳಕೆ ಮಾಡುವುದು ಇನ್ನಷ್ಟು ಉತ್ತಮ. ಪರಿಸರ ವ್ಯವಸ್ಥೆಯ ಮೇಲೆ ಹಾನಿ ಮಾಡುವ ವಸ್ತುಗಳನ್ನು ಮರುಬಳಕೆ ಮಾಡುವುದರಿಂದ ಮಾಲಿನ್ಯ ತಡೆಯುವತ್ತ ಒಂದು ಹೆಜ್ಜೆ ಮುಂದಿಡಬಹುದು.