ನವದೆಹಲಿ : ಜ್ಞಾನವಾಪಿ ಮಸೀದಿ ವಿವಾದವು ರಾಜಕೀಯ ಅಜೆಂಡಾದ ಭಾಗವಾಗಿದೆ. ಇತಿಹಾಸದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಐತಿಹಾಸಿಕ ಅಧ್ಯಯನ ಕೇಂದ್ರದ ಮಾಜಿ ಅಧ್ಯಕ್ಷೆ, ಇತಿಹಾಸ ಪ್ರಾಧ್ಯಾಪಕಿಯಾದ ಮೃದುಲಾ ಮುಖರ್ಜಿ ಮಂಗಳವಾರ ಹೇಳಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಮುಖರ್ಜಿ, ಈಗ ಉದ್ಭವಿಸಿರುವ ಜ್ಞಾನವಾಪಿ ಮಸೀದಿ, ಮಥುರಾ ಅಥವಾ ಇತರ ವಿವಾದಗಳು ಏಕಕಾಲದಲ್ಲಿ ಆರಂಭವಾಗಿವೆ. ಪ್ರಸ್ತುತ ಮಸೀದಿಗಳಿರುವ ಸ್ಥಳದಲ್ಲಿ ದೇವಾಲಯದ ಅವಶೇಷಗಳು ಕಂಡು ಬರುವ ಈ ವಿಷಯಗಳಲ್ಲಿ ಇದೆಲ್ಲವೂ ರಾಜಕೀಯ ಅಜೆಂಡಾದ ಭಾಗವಾಗಿದೆ. ಇದಕ್ಕೂ ಇತಿಹಾಸಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ರಾಜಕೀಯಕ್ಕೆ ಇದೆಲ್ಲದರ ಸಂಬಂಧವಿದೆ ಎಂದಿದ್ದಾರೆ.
ನ್ಯಾಯಾಲಯದ ಆದೇಶದಂತೆ ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ಸಮಯದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಯಿತು. ಬಳಿಕ ಈ ವಿವಾದವು ಮಥುರಾ ದೇವಸ್ಥಾನ ಮತ್ತು ಶಾಹಿ ಈದ್ಗಾ ಪ್ರಕರಣವನ್ನು ಹಿಂದಕ್ಕೆ ತಳ್ಳಿತು.
ಕೆಲವು ಹಿಂದೂ ಅರ್ಜಿದಾರರು ಅಲ್ಲಿ ದೇವಸ್ಥಾನವಿತ್ತು ಮತ್ತು ಶಿವಲಿಂಗದ ಆವಿಷ್ಕಾರವು ಅದಕ್ಕೆ ಪುರಾವೆಯಾಗಿದೆ ಎಂದು ಹೇಳಿದರೆ, ಮುಸ್ಲಿಂ ಅರ್ಜಿದಾರರು ಇದಕ್ಕೆ ವಿರುದ್ಧವಾಗಿ ವಾದಿಸುತ್ತಾರೆ. ವಿವಿಧ ಇತಿಹಾಸಕಾರರು ವಿವಿಧ ಪ್ರಕಾರದ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರೊಂದಿಗೆ ಈ ವಿವಾದವು ಹಠಾತ್ ವೇಗವನ್ನು ಪಡೆದುಕೊಂಡಿತು ಮತ್ತು ಈ ವಿಷಯವು ಮತ್ತೊಮ್ಮೆ ಸಾರ್ವಜನಿಕರ ಗಮನವನ್ನು ಸೆಳೆಯಿತು.
ಇದನ್ನೂ ಓದಿ: ಕುತುಬ್ ಮಿನಾರ್ ಸಂಕೀರ್ಣದಲ್ಲಿ ದೇವಾಲಯ ಕೆಡವಿ ಮಸೀದಿ ಕಟ್ಟಲಾಗಿಲ್ಲ: ಪುರಾತತ್ವ ಇಲಾಖೆ, ತೀರ್ಪು ಕಾಯ್ದಿರಿಸಿದ ಕೋರ್ಟ್
ಈ ನಡುವೆ ಪ್ರೊ.ಕಪಿಲ್ ಕುಮಾರ್ ಈಟಿವಿ ಭಾರತದ ಜೊತೆ ಮಾತನಾಡುತ್ತಾ, ಬಾಬರ್ ಕಾಲದಿಂದ ಷಹಜಹಾನ್ವರೆಗೆ ಮಸೀದಿಗಳು ಇರಲಿಲ್ಲ. ಆದರೆ, ಕೋಲ್ಕತ್ತಾದ ರಾಯಲ್ ಏಷ್ಯಾಟಿಕ್ ಸೊಸೈಟಿಯಿಂದ ಪಡೆದ ಪುರಾವೆಗಳ ಪ್ರಕಾರ, ಕೆಡವಲು ಆದೇಶ ನೀಡಲಾಗಿತ್ತು ಎಂಬುದಕ್ಕೆ ಪುರಾವೆಗಳಿವೆ. ದೇವಾಲಯಗಳನ್ನು ಕೆಡವಲು ಆ ಸಮಯದಲ್ಲಿ ಔರಂಗಜೇಬನಿಗೆ ತಿಳಿಸಲಾಗಿತ್ತು ಎಂಬುದು ಮಸಿರ್-ಎ-ಅಲಂಗೀರ್‌ನಿಂದ ಸ್ಪಷ್ಟವಾಗಿದೆ.