ಗಾಂಧಿನಗರ, ಗುಜರಾತ್: ಔಷಧ ತಯಾರಿಕೆ ಘಟಕದಲ್ಲಿದ್ದ ಅಂಡರ್ಗ್ರೌಂಡ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸುವ ವೇಳೆ ವಿಷಕಾರಿ ಅನಿಲ ಸೇವಿಸಿ ಐವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಗಾಂಧಿನಗರ ಜಿಲ್ಲೆಯಲ್ಲಿ ನಡೆದಿದೆ.
ಕಲೋಲ್ ತಾಲೂಕಿನ ಔಷಧೀಯ ಘಟಕದ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ ಎಂದು ಗಾಂಧಿನಗರದ ಮುಖ್ಯ ಅಗ್ನಿಶಾಮಕ ಅಧಿಕಾರಿ ಮಹೇಶ್ ಮಾಡ್ ತಿಳಿಸಿದ್ದಾರೆ.
ಔಷಧ ತಯಾರಿಕಾ ಘಟಕವನ್ನು ಮುಚ್ಚಿದ್ದ ಕಾರಣದಿಂದ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಈ ಟ್ಯಾಂಕ್ನಲ್ಲಿ ದ್ರವ ತ್ಯಾಜ್ಯವನ್ನು ಸಂಗ್ರಹಿಸಿ ನಂತರ ಅದನ್ನು ಸಂಸ್ಕರಣೆಗೆ ಕಳುಹಿಸಲಾಗುತ್ತಿತ್ತು ಎಂದು ಅಧಿಕಾರಿ ಹೇಳಿದ್ದಾರೆ.
ಟ್ಯಾಂಕ್ನಲ್ಲಿ ವಿಷಾನೀಲ ಇರುವುದನ್ನು ತಿಳಿದುಕೊಳ್ಳದ ಕಾರ್ಮಿಕನೋರ್ವ ಅದರೊಳಗೆ ಇಳಿದಿದ್ದು, ಮೂರ್ಛೆ ಹೋಗಿದ್ದಾನೆ. ಇದಾದ ನಂತರ ಒಬ್ಬರಾದ ನಂತರ ಒಬ್ಬರಂತೆ ನಾಲ್ವರು ಕಾರ್ಮಿಕರು ಆತನ ರಕ್ಷಣೆಗೆ ಧಾವಿಸಿದ್ದು, ಅವರೂ ಕೂಡಾ ಮೂರ್ಛೆ ಹೋಗಿ ಸಾವನ್ನಪ್ಪಿದ್ದಾರೆ. ಕಾರ್ಖಾನೆಯ ಮಾಲೀಕರು ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಸಾಧನ ಅಥವಾ ಮಾಸ್ಕ್ ನೀಡಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ತಿಳಿದ ನಂತರ ಸ್ಥಳಕ್ಕೆ ಧಾವಿಸಿದ ಗಾಂಧಿನಗರ ಅಗ್ನಿ ಶಾಮಕ ಸಿಬ್ಬಂದಿ ಮೃತದೇಹಗಳನ್ನು ಟ್ಯಾಂಕ್ನಿಂದ ಹೊರತೆಗೆದಿದ್ದಾರೆ. ಮೃತರನ್ನು ವಿನಯ್, ಶಾಹಿ, ದೇವೇಂದ್ರ ಕುಮಾರ್, ಆಶಿಶ್ ಕುಮಾರ್ ಮತ್ತು ರಂಜನ್ ಕುಮಾರ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: 'ನಾನು ಜಯಲಲಿತಾ ಪುತ್ರಿ, ಮೈಸೂರಿನಲ್ಲಿ ಹುಟ್ಟಿದ್ದು, ಸಾಬೀತುಪಡಿಸುತ್ತೇನೆ'