ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮೂಲದ ಕ್ರಿಕೆಟ್ ಬುಕ್ಕಿಯೋರ್ವನಿಗೆ ಸೇರಿದ 3.40 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ. ಕ್ರಿಕೆಟ್ ಬೆಟ್ಟಿಂಗ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅನಿಲ್ ಜೈಸಿಂಘಾನಿ ಎಂಬುವರೇ ಬುಕ್ಕಿಯಾಗಿದ್ದು, ಇದೇ ಏಪ್ರಿಲ್ 8ರಂದು ಇಡಿ ಅಧಿಕಾರಿಗಳು ಇವರನ್ನು ಬಂಧಿಸಿದ್ದರು.
2015ರಲ್ಲಿ ಕ್ರಿಕೆಟ್ ಬುಕ್ಕಿ ಅನಿಲ್ ಜೈಸಿಂಘಾನಿ ವಿರುದ್ಧ ವಡೋದರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದರ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಸಹ ತನಿಖೆ ಕೈಗೊಂಡಿತ್ತು. ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿರುವ ಅಹಮದಾಬಾದ್‌ನ ಮತ್ತೋರ್ವನಿಗೆ ಸಂಪರ್ಕ ಹೊಂದಿದ ವ್ಯಕ್ತಿಗಳ ಸಹಾಯದಿಂದ ವಂಚನೆ ಮಾಡಿ ಗಮನಾರ್ಹ ಪ್ರಮಾಣದ ಹಣವನ್ನು ಸಂಗ್ರಹಿಸಿದ್ದಾನೆ ಎಂದು ತನಿಖೆಯಲ್ಲಿ ಬಯಲಾಗಿದೆ.
ಇದನ್ನೂ ಓದಿ: ಕ್ರಿಕೆಟ್ ಬೆಟ್ಟಿಂಗ್ ಸಾಲ ತೀರಿಸಲು ಒಂಟಿ ವೃದ್ಧೆಯ ಕೊಲೆ, ಕಳ್ಳತನ: ಆರೋಪಿಗಳು ಸೆರೆ
ಜೈಸಿಂಘಾನಿ 2015ರಿಂದ ಇಡಿ ಸಮನ್ಸ್‌ನಿಂದ ತಪ್ಪಿಸಿಕೊಳ್ಳುತ್ತಿದ್ದ. ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಇವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದರೂ ಸಹ ತನಿಖೆಗೆ ಸಹಕರಿಸುತ್ತಿರಲಿಲ್ಲ. ಕೊನೆಗೆ ಏಪ್ರಿಲ್ 8ರಂದು ಬುಕ್ಕಿಯನ್ನು ಅಧಿಕಾರಿಗಳು ಬಂಧಿಸಿದ್ದರು. ಅಲ್ಲದೇ, ಈಗಾಗಲೇ ಇವರ ವಿರುದ್ಧ ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿದೆ. ಇತ್ತೀಚೆಗೆ ಜಾಮೀನು ಅರ್ಜಿಯನ್ನು ಅಹಮದಾಬಾದ್‌ನ ಪಿಎಂಎಲ್‌ಎ ನ್ಯಾಯಾಲಯವು ತಿರಸ್ಕರಿಸಿದೆ.
ಜೂನ್ 9ರಂದು ಬುಕ್ಕಿ ಅನಿಲ್ ಜೈಸಿಂಘ ಅವರಿಗೆ ಸೇರಿದ್ದ ಸ್ಥಳಗಳ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಲಾಗಿತ್ತು. ಇದೀಗ ಜೈಸಿಂಘನಿ ಹೆಸರಿನಲ್ಲಿ ನೋಂದಾಯಿಸಲಾದ 3.40 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಪತ್ತೆ ಹಚ್ಚಿ ಜಪ್ತಿ ಮಾಡಲಾಗಿದೆ. ಹೆಚ್ಚುವರಿಯಾಗಿ ಆರೋಪಿ ಜೈಸಿಂಘಾನಿ ವಿರುದ್ಧ ಜೂನ್ 6ರಂದು ಅಹಮದಾಬಾದ್‌ನ ವಿಶೇಷ ಪಿಎಂಎಲ್‌ಎ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ ಆನ್‌ಲೈನ್ ಬೆಟ್ಟಿಂಗ್: ಅಂತಾರಾಜ್ಯ ಜಾಲಗಳು ಪತ್ತೆ, 1.84 ಕೋಟಿ ಜಪ್ತಿ
ಕಳೆದ ಫೆಬ್ರವರಿಯಲ್ಲಿ ಗುಜರಾತ್ನಲ್ಲಿ ಬೃಹತ್ ಕ್ರಿಕೆಟ್ ಬೆಟ್ಟಿಂಗ್ ಜಾಲವೊಂದನ್ನು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಬಯಲು ಮಾಡಿದ್ದರು. ಕ್ರಿಕೆಟ್ ಬುಕ್ಕಿಗಳು ನಕಲಿ ಬ್ಯಾಂಕ್‌ಗಳನ್ನು ಖಾತೆ ತೆರೆದು ಸುಮಾರು 1,400 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸಿದ ದಂಧೆಯನ್ನು ಪತ್ತೆಹಚ್ಚಿದ್ದರು. ಕೆಲವು ಬುಕ್ಕಿಗಳು ದುಬೈನಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುವುದನ್ನೂ ಪೊಲೀಸರು ಬಯಲಿಗೆ ಎಳೆದಿದ್ದರು.
ಈ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ದೊಡ್ಡ ಬುಕ್ಕಿಗಳಾದ ರಾಕೇಶ್ ರಾಜ್‌ದೇವ್ ಅಲಿಯಾಸ್ ಆರ್‌ಆರ್ ಮತ್ತು ಟಾಮಿ ಪಟೇಲ್ ಸೇರಿದಂತೆ ಐವರನ್ನು ಪೊಲೀಸರು ಗುರುತಿಸಿದ್ದರು. ಅಲ್ಲದೇ, ಬುಕ್ಕಿಗಳು 20 ವಿವಿಧ ಬ್ಯಾಂಕ್ಗಳಲ್ಲಿ ನಕಲಿ ದಾಖಲೆಗಳ ಮೂಲಕ ನಕಲಿ ಖಾತೆಗಳನ್ನು ತೆರೆದು ಹಣದ ದಂಧೆ ನಡೆಸುತ್ತಿದ್ದರು. ಬೆಟ್ಟಿಂಗ್ ಹಣ ಪಾವತಿಗಾಗಿ ದುಬೈಗೆ ಹಣ ವರ್ಗಾವಣೆ ಮಾಡಲು ಈ ಖಾತೆಗಳನ್ನು ಬಳಕೆ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದರು.
ಇದನ್ನೂ ಓದಿ: ಕ್ರಿಕೆಟ್ ಬೆಟ್ಟಿಂಗ್ ಜಾಲ ಬಯಲು: ದುಬೈನಿಂದ ಬುಕ್ಕಿಗಳ ಕಾರ್ಯಾಚರಣೆ, 1400 ಕೋಟಿ ವಹಿವಾಟು ಶಂಕೆ