ಅಹ್ಮದಾಬಾದ್ (ಗುಜರಾತ್): ಹೃದಯಾಘಾತಕ್ಕೆ ಒಳಗಾಗಿದ್ದ 107 ವರ್ಷ ವಯಸ್ಸಿನ ವಯೋವೃದ್ಧೆಗೆ ಗುಜರಾತ್ ವೈದ್ಯರು ಅತ್ಯಂತ ಕಠಿಣ ಮತ್ತು ಸವಾಲಿನ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಯನ್ನು ಮಾಡಿ ಆಕೆಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೃದ್ಧೆಯ ಇಳಿ ವಯಸ್ಸು ಮತ್ತು ನಿಶಕ್ತಿ ಪರಿಸ್ಥಿತಿಯಲ್ಲೂ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಮಧ್ಯಪ್ರದೇಶದ ಮಂಡಸೌರ ಜಿಲ್ಲೆಯ ಜಮ್ನಾಬೆನ್ ಎಂಬ ವೃದ್ಧೆಯು ಹೃದಯಾಘಾತದಿಂದ ಆಕೆಯ ರಕ್ತನಾಳಗಳಲ್ಲಿ ಶೇ.99ರಷ್ಟು ಸಮಸ್ಯೆ ಉಂಟಾಗಿತ್ತು. ಅಲ್ಲದೇ, ತಮ್ಮೂರಿನಿಂದ ಸುಮಾರು 8 ಗಂಟೆ ಕಾಲ ದೂರದ ಪ್ರಯಾಣದಿಂದ ವೃದ್ಧೆಯನ್ನು ಅಹ್ಮದಾಬಾದ್ನ ಮಾರೆಂಗೋ ಸಿಮ್ಸ್ (ಸಿಐಎಂಸಿ) ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಂತಹ ಸಂದರ್ಭದಲ್ಲಿ ಆಕೆ ಹೃದಯ ಬಡಿತವನ್ನು ಸಹಜ ಸ್ಥಿತಿಗೆ ತರಲು ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆ ಮಾಡುವುದು ವೈದ್ಯರು ಸವಾಲು ಎಂದೇ ಭಾವಿಸಿದ್ದರು. ಆದರೂ, ಸವಾಲನ್ನು ಮೀರಿ ಹೃದ್ರೋಗ ತಜ್ಞ ಡಾ.ಕೆಯೂರ್ ಪಾರಿಖ್ ಮತ್ತು ಅರಿವಳಿಕೆ ತಜ್ಞ ಚಿಂತನ್ ಸೇಠ್ ಅವರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದೆ.
ಉತ್ತಮ ಆರೋಗ್ಯಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ. ಅಜ್ಜಿಯು ಇನ್ನೂ ಅನೇಕ ವರ್ಷಗಳ ಕಾಲ ಜೀವಿಸುವಂತೆ ಆಗಲಿ ಎಂದು ಡಾ. ಪಾರಿಖ್ ಹೇಳಿದ್ದಾರೆ. ಇತ್ತ, ಹಲವು ದಿನಗಳಿಂದ ಇದೇ ಆಸ್ಪತ್ರೆಯಲ್ಲಿ ಅಜ್ಜಿಗೆ ನಾವು ಚಿಕಿತ್ಸೆ ಕೊಡಿಸುತ್ತಿದ್ದೇವೆ. ಈಗಲೂ ಆಕೆ ಬೇಗ ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇದೆ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.
ದೇಶದಲ್ಲಿ 4-5 ಕೋಟಿ ಜನರು ಐಹೆಚ್ಡಿ (ರಕ್ತ ಕೊರತೆಯ ಹೃದಯ ರೋಗ) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಶೇ.15-20ರಷ್ಟು ಜನ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ದೇಹದಲ್ಲಿ ರಕ್ತ ಮತ್ತು ಆಮ್ಲಜನಕದ ಪ್ರಮಾಣ ಕಡಿಮೆಯಾದಾಗ ಇಂತಹ ಹೃದಯಾಘಾತ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ನಮ್ಮ ದೇಹ, ನಾವು ಧರಿಸುವ ಬಟ್ಟೆಯಿಂದಲೇ ವಿದ್ಯುತ್ ಉತ್ಪಾದನೆ: ಇದು ಹೇಗೆ ಸಾಧ್ಯ ಗೊತ್ತಾ?