ಲ್ಯಾಖ್ಪುರ್ ಪರ್ಘರಿ (ಬಿಹಾರ): ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿಸಿ ಉಗ್ರರ ದಾಳಿ ಮುಂದುವರಿದಿದೆ. ಘಟನೆಯಲ್ಲಿ ಬಿಹಾರ ಮೂಲದ ಬೀದಿ ಬದಿಯ ವ್ಯಾಪಾರಿಗಳು ಮೃತಪಟ್ಟಿದ್ದಾರೆ. ಶ್ರೀನಗರದಲ್ಲಿ ಇಂದು ಮುಂಜಾನೆ ನಡೆದ ಉಗ್ರರ ದಾಳಿಯಲ್ಲಿ ಪಾಟ್ನಾ ಮೂಲದ ಬಂಕಾ ಜಿಲ್ಲೆಯ ಹಳ್ಳಿಯೊಂದರ ಅರವಿಂದ್ ಕುಮಾರ್ ಎಂಬಾತ ಮೃತಪಟ್ಟಿದ್ದಾನೆ.
ಶ್ರೀನಗರದಲ್ಲಿ ಗೋಲ್ಗಪ್ಪ ಮಾಡಿ ಜೀವನ ಸಾಗಿಸುತ್ತಿದ್ದ ಅರವಿಂದ್, ಉಗ್ರರ ಗುಂಡೇಟಿಗೆ ಬಲಿಯಾಗಿರೋದು ಕುಟುಂಬಸ್ಥರನ್ನು ಶೋಕ ಸಾಗರಕ್ಕೆ ದೂಡಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಆದ್ರೆ, ಅರವಿಂದ್ ಕುಟುಂಬಸ್ಥರು, ಸರ್ಕಾರ ನಮ್ಮ ಕಷ್ಟವನ್ನು ಅರಿತುಕೊಳ್ಳಬೇಕು. ಪರಿಹಾರದ ಮೊತ್ತವನ್ನು 50 ಲಕ್ಷ ರೂಪಾಯಿಗೆ ಏರಿಸುವುದರ ಜತೆಗೆ ಮನೆಯ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ಕಳೆದ 15 ದಿನಗಳಲ್ಲಿ ನಡೆಸಿದ ದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಅಕ್ಟೋಬರ್ 7ರಂದು ಉಗ್ರರು ಶಾಲೆಯ ಪ್ರಿನ್ಸಿಪಾಲ್ ಹಾಗೂ ಶಿಕ್ಷಕನನ್ನು ಹತ್ಯೆ ಮಾಡಿದ್ದರು.
ಮೂರು ದಿನಗಳ ಹಿಂದೆ ಉಗ್ರರ ದಾಳಿಯಲ್ಲಿ ಫಾರ್ಮಸಿ ಮಾಲೀಕ ಎಂಎಲ್ ಬಿಂದ್ರೋ ಸಾವನ್ನಪ್ಪಿದ್ದರು. ಬೀದಿ ಬದಿ ವ್ಯಾಪಾರಿ, ಟ್ಯಾಕ್ಸಿ ಚಾಲಕ ಸೇರಿದಂತೆ ಹಲವರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಉಗ್ರರ ಹಾವಳಿ ಹೆಚ್ಚಾಗುತ್ತಿದ್ದಂತೆಯೇ ಅಲರ್ಟ್ ಆಗಿರುವ ಸೇನೆ ಕುಲ್ಗಾಂ ಪ್ರದೇಶವನ್ನು ಸುತ್ತುವರೆದು ಕಾರ್ಯಾಚರಣೆ ನಡೆಸುತ್ತಿದೆ.