ಲೂಧಿಯಾನ (ಪಂಜಾಬ್) : ಲೂಧಿಯಾನದ ಲಾಡೋವಾಲ್ ಟೋಲ್ ಪ್ಲಾಜಾದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಿಲೀಪ್ ರಾಣಾ ಅಲಿಯಾಸ್ ಗ್ರೇಟ್ ಖಲಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಜಲಂಧರ್‌ನಿಂದ ಕರ್ನಾಲ್‌ಗೆ ತೆರಳುತ್ತಿದ್ದಾಗ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಟೋಲ್ ಪ್ಲಾಜಾದಲ್ಲಿ ಕೆಲವರು ಬಲವಂತವಾಗಿ ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಿದರು. ಛಾಯಾಚಿತ್ರ ತೆಗೆಯಲು ನಿರಾಕರಿಸಿದಾಗ ತನಗೆ ತೊಂದರೆ ಉಂಟು ಮಾಡಿದ್ದಾರೆಂದು ಹೇಳಿದರು.
ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಮಾನಹಾನಿಯಾಗುವಂತೆ ವಿಡಿಯೋ ಮಾಡಿರುವುದು ಸೇರಿದಂತೆ ಇಡೀ ಘಟನೆ ಬಗ್ಗೆ ಆಳವಾದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ.
ಉದ್ದೇಶಪೂರ್ವಕವಾಗಿ ಇಂತಹ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ಟೋಲ್ ಕಾರ್ಮಿಕರು ತಮ್ಮನ್ನು ತಾವು ಫೇಮಸ್ ಮಾಡಿಕೊಳ್ಳಲು ಬಯಸಿದ್ದರಿಂದ ಇಂತಹ ಕ್ರಮಕ್ಕೆ ಮುಂದಾಗಿದ್ದಾಗಿ ತಿಳಿಸಿದ್ದಾರೆ.
ಖಲಿ ಅವರ ದೂರಿನ ಆಧಾರದ ಮೇಲೆ ಪೊಲೀಸರು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆಂದು ಎಸಿಪಿ ಸುಮಿತ್ ಸೂದ್ ಹೇಳಿದ್ದಾರೆ. ನಮಗೆ ಲಭ್ಯವಿರುವ ಸಾಕ್ಷ್ಯಾಧಾರಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: ಹೆತ್ತ ಮಕ್ಕಳ ಮುಂದೇಯೇ ನೇಣಿಗೆ ಶರಣಾದರಾ ತಾಯಿ? : ಕೊಲೆ ಎಂದು ದೂರು ನೀಡಿದ ಕುಟುಂಬಸ್ಥರು