ಹೈದರಾಬಾದ್ (ತೆಲಂಗಾಣ): ತೆಲಂಗಾಣದ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ವಿಮಾನದಲ್ಲಿದ್ದ ವ್ಯಕ್ತಿಯೊಬ್ಬರಿಗೆ ತುರ್ತು ಚಿಕಿತ್ಸೆ ನೀಡಿ, ಪ್ರಾಣ ಕಾಪಾಡಿದ್ದಾರೆ. ದೆಹಲಿ ಮತ್ತು ಹೈದರಾಬಾದ್ ನಡುವಿನ ಇಂಡಿಗೋ ವಿಮಾನದಲ್ಲಿ ಎದೆನೋವು ಕಾಣಿಸಿಕೊಂಡು ಸಹ ಪ್ರಯಾಣಿಕರೊಬ್ಬರು ಅಸ್ವಸ್ಥಗೊಂಡಿದ್ದರು. ಈ ವೇಳೆ, ವಿಮಾನದಲ್ಲೇ ರಾಜ್ಯಪಾಲರು ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಉತ್ತರ ಪ್ರದೇಶದ ವಾರಾಣಸಿಗೆ ತೆರಳಿದ್ದ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಶುಕ್ರವಾರ ಮಧ್ಯರಾತ್ರಿ ದೆಹಲಿಯಿಂದ ಹೈದರಾಬಾದ್ಗೆ ಇಂಡಿಗೋ ವಿಮಾನದಲ್ಲಿ ಬರುತ್ತಿದ್ದರು. ಈ ವೇಳೆ, ವಿಮಾನದಲ್ಲಿದ್ದ ಸಹ ಪ್ರಯಾಣಿಕರೊಬ್ಬರು ಎದೆನೋವಿನಿಂದ ಅಸ್ವಸ್ಥರಾದರು. ಇದನ್ನು ಗಮನಿಸಿದ ವಿಮಾನ ಸಿಬ್ಬಂದಿ ಪ್ರಯಾಣಿಕರಲ್ಲಿ ವೈದ್ಯರಿದ್ದಾರೆಯೇ ಎಂದು ಕೇಳಿದರು.
![governor-tamilisai-administered-first-aid-to-a-passenger-in-flight](https://etvbharatimages.akamaized.net/etvbharat/prod-images/15906507_thumb4.jpg)
ಆಗ ತಮಿಳಿಸೈ ಸ್ವಯಂ ಆಗಿ ತಾವೇ ಮುಂದು ಬಂದು ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿದರು. ಈ ಪ್ರಾಥಮಿಕ ಚಿಕಿತ್ಸೆಯೊಂದಿಗೆ ಚೇತರಿಸಿಕೊಂಡ ವ್ಯಕ್ತಿ ರಾಜ್ಯಪಾಲರಿಗೆ ಧನ್ಯವಾದ ಅರ್ಪಿಸಿದರು. ಇತ್ತ, ವಿಮಾನದ ಸಿಬ್ಬಂದಿ ಸಮಯೋಚಿತ ಸ್ಪಂದನೆಗೆ ರಾಜ್ಯಪಾಲೆ ತಮಿಳಿಸೈ ಅವರೇ ಸಹ ಅಭಿನಂದಿಸಿದರು.
ಇದೇ ವೇಳೆ, ವಿಮಾನದಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಲಭ್ಯವಾಗುವಂತೆ ಮಾಡಬೇಕು. ವಿಮಾನಗಳಲ್ಲಿ ವೈದ್ಯರ ಮಾಹಿತಿ ಕಲ್ಪಿಸುವ ವ್ಯವಸ್ಥೆ ಇರಬೇಕು ಹಾಗೂ ವಿಮಾನ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆಯ ತರಬೇತಿ ನೀಡಿದರೆ ಒಳ್ಳೆಯದು. ಇದರಿಂದ ತುರ್ತು ಸಂದರ್ಭಗಳಲ್ಲಿ ಇತರರ ಪ್ರಾಣ ಉಳಿಸಲು ಸಹಾಯವಾಗುತ್ತದೆ ಎಂದು ರಾಜ್ಯಪಾಲೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಧುಮೇಹಿಗಳು ಡಾರ್ಕ್ ಚಾಕೊಲೇಟ್ ತಿನ್ನಬಹುದಾ? ಸಂಶೋಧನೆಗಳು ಏನನ್ನುತ್ತವೆ?