ನವದೆಹಲಿ: ಭಾರತದಲ್ಲಿ ತನ್ನ ಪ್ಲೇ ಸ್ಟೋರ್‌ನಲ್ಲಿ ಬೆಳೆಯುತ್ತಿರುವ ಹಾನಿಕಾರಕ ಹಣಕಾಸು ಸೇವೆಗಳ ಅಪ್ಲಿಕೇಶನ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಗೂಗಲ್, ಗುರುವಾರ ನೂರಾರು ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ತೆಗೆದು ಹಾಕಿದೆ. ಅಲ್ಲದೇ ಅಂತಹ ಹಲವಾರು ಆ್ಯಪ್‌ಗಳು ಆ್ಯಪ್ ನೀತಿಗಳನ್ನು ಉಲ್ಲಂಘಿಸಿರುವುದನ್ನು ಕಂಡುಹಿಡಿದಿದೆ.
ಹೀಗೆ ಗುರುತಿಸಿಕೊಂಡಿರುವ ಕೆಲ ಅಪ್ಲಿಕೇಶನ್‌ಗಳ ಡೆವಲಪರ್‌ಗಳು ಭಾರತದಲ್ಲಿ ಅನ್ವಯವಾಗುವ ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸುತ್ತಿದ್ದಾರೆ ಎಂಬುದನ್ನು ನಿರೂಪಿಸಲು ಕೇಳಿಕೊಂಡಿರುವುದಾಗಿ ಕಂಪನಿ ತಿಳಿಸಿದೆ.
"ಬಳಕೆದಾರರು ಮತ್ತು ಸರ್ಕಾರಿ ಸಂಸ್ಥೆಗಳು ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ ನಾವು ಭಾರತದಲ್ಲಿರುವ ನೂರಾರು ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ತೆಗೆದು ಹಾಕಿದ್ದೇವೆ" ಎಂದು ಉತ್ಪನ್ನ, ಆಂಡ್ರಾಯ್ಡ್ ಭದ್ರತೆ ಮತ್ತು ಗೌಪ್ಯತೆಯ ಉಪಾಧ್ಯಕ್ಷ ಸುಝೇನ್ ಫ್ರೇ ಹೇಳಿದರು.
"ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸುವಲ್ಲಿ ವಿಫಲವಾದ ಅಪ್ಲಿಕೇಶನ್‌ಗಳನ್ನು ಇನ್ನು ಮುಂದೆಯೂ ಯಾವುದೇ ಸೂಚನೆ ಇಲ್ಲದೆ ತೆಗೆದುಹಾಕಲಾಗುತ್ತದೆ" ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಭಾರತದಲ್ಲಿ ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳಲ್ಲಿ ವ್ಯತ್ಯಯವಾಗಿದ್ದು, ಲಕ್ಷಾಂತರ ಬಳಕೆದಾರರ ಡೇಟಾವನ್ನು ಅಪಾಯಕ್ಕೆ ದೂಡಿದೆ.