ಚೆನ್ನೈ (ತಮಿಳುನಾಡು): ತಮಿಳುನಾಡಿನ ಪರಿಶಿಷ್ಟ ಜಾತಿಯ ಎಂಜಿನಿಯರಿಂಗ್ ವಿದ್ಯಾರ್ಥಿ ಗೋಕುಲ್‌ರಾಜ್ ಹತ್ಯೆಗೆ ಸಂಬಂಧಿಸಿದಂತೆ ಎಂಟು ಅಪರಾಧಿಗಳಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ. ಇದೇ ವೇಳೆ, ಇತರ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಐದು ವರ್ಷಗಳ ಜೈಲು ಶಿಕ್ಷೆಗೆ ಬದಲಾಯಿಸಿದೆ ಎಂದು ಆದೇಶಿಸಿದೆ.
2015ರ ಜೂನ್ 24ರಂದು ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕಾಗಿ ಸೇಲಂ ಜಿಲ್ಲೆಯ ಓಮಲೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ಗೋಕುಲ್‌ರಾಜ್ ಅವರನ್ನು ಕೊಲೆ ಮಾಡಲಾಗಿತ್ತು. ಆತನ ಮೃತದೇಹ ನಾಮಕ್ಕಲ್ ಜಿಲ್ಲೆಯ ಪಲ್ಲಿಪಾಳ್ಯಂನ ರೈಲ್ವೆ ಹಳಿಯಲ್ಲಿ ತಲೆ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 2022ರ ಮಾರ್ಚ್ನಲ್ಲಿ ಮಧುರೈ ವಿಶೇಷ ಸೆಷನ್ಸ್ ನ್ಯಾಯಾಲಯವು ಹತ್ತು ಜನರಿಗೆ ಯಾವುದೇ ಪರಿಹಾರವಿಲ್ಲದೇ ಸಾಯುವವರೆಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ತೀರನ್ ಚಿನ್ನಮಲೈ ಗೌಂಡರ್ ಪೆರವೈ ರಾಜಕೀಯ ಪಕ್ಷದ ಮುಖ್ಯಸ್ಥ ಯುವರಾಜ್ ಸೇರಿದಂತೆ ಅಪರಾಧಿಗಳು ಮೇಲ್ಮನವಿ ಸಲ್ಲಿಸಿದರು.
ನೈತಿಕ ಅಪರಾಧಕ್ಕೆ ಯಾವುದೇ ಸ್ಥಾನವಿಲ್ಲ - ನ್ಯಾಯ ಪೀಠ: ನ್ಯಾಯಮೂರ್ತಿಗಳಾದ ಎಂಎಸ್ ರಮೇಶ್ ಮತ್ತು ಎನ್.ಆನಂದ್ ವೆಂಕಟೇಶ್ ಅವರನ್ನೊಳಗೊಂಡ ವಿಭಾಗೀಯ ಪೀಠ ಇಂದು ಈ ಮೇಲ್ಮನವಿಗಳನ್ನು ವಜಾಗೊಳಿಸಿ ಪ್ರಕರಣದ ಹಿಂದಿನ ಸೆಷನ್ಸ್ ನ್ಯಾಯಾಲಯ ತೀರ್ಪನ್ನು ಎತ್ತಿಹಿಡಿದಿದೆ. ಆರೋಪಿಗಳಿಗೆ ಶಿಕ್ಷೆ ವಿಧಿಸುವ ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ ಎಂದು ಪೀಠ ಹೇಳಿದೆ. ಕ್ರಿಮಿನಲ್ ನ್ಯಾಯಶಾಸ್ತ್ರದಲ್ಲಿ ನೈತಿಕ ಅಪರಾಧಕ್ಕೆ ಯಾವುದೇ ಸ್ಥಾನವಿಲ್ಲ ಎಂಬ ಅಂಶದ ಬಗ್ಗೆ ನಾವು ಜಾಗೃತರಾಗಿದ್ದೇವೆ ಎಂದು ನ್ಯಾಯ ಪೀಠ ತಿಳಿಸಿದೆ.
ಯುವರಾಜ್ ಮತ್ತು ಇತರ ಅಪರಾಧಿಗಳ ಪರ ವಾದ ಮಂಡಿಸಿದ ವಕೀಲರು, ಈ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಕ್ಯಾಮೆರಾ ರೆಕಾರ್ಡಿಂಗ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಸಂಗ್ರಹದಲ್ಲಿನ ದೋಷಗಳು ಮತ್ತು ತಪ್ಪುಗಳು ಇವೆ. ಯಾವುದೇ ಪುರಾವೆಗಳಿಲ್ಲ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ತಿರುಚಿರಬಹುದು ಎಂದು ವಾದಿಸಿದರು. ಸರ್ಕಾರದ ಪರ ವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಭವಾನಿ ಮೋಹನ್, ಗೋಕುಲರಾಜ್‌ನ ಕೊಲೆ ಬಹಳ ಪೂರ್ವಯೋಜಿತವಾಗಿದ್ದು, ಪ್ರಾಸಿಕ್ಯೂಷನ್ ಸಾಕ್ಷಿಗಳೂ ಕೊಲೆಯನ್ನು ದೃಢಪಡಿಸಿರುವುದರಿಂದ ತಪ್ಪಿತಸ್ಥರಿಗೆ ವಿಧಿಸಿರುವ ಶಿಕ್ಷೆಯನ್ನು ಖಾತ್ರಿ ಪಡಿಸಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ನ್ಯಾಯಾಲಯವು ಘಟನೆಗಳ ಸರಣಿ, ಗೋಕುಲರಾಜ್ ಸಂಬಂಧ ಹೊಂದಿದ್ದ ಮಹಿಳೆಯೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿರುವುದು. ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾದ ಗೋಕುಲರಾಜ್ ದೇಹ, ಅಪರಾಧದ ಹಿಂದಿನ ಉದ್ದೇಶ ಹಾಗೂ ಪ್ರಕರಣದಲ್ಲಿ ವೈಜ್ಞಾನಿಕ ಪುರಾವೆಗಳ ಜೊತೆಗೆ ಘಟನೆಯ ನಂತರ ಯುವರಾಜ್ ನಡವಳಿಕೆ ಸೇರಿ ಹಲವು ವಿಷಯಗಳನ್ನು ಪರಿಶೀಲಿಸಿ ಅಂತಿಮ ತನ್ನ ತೀರ್ಪು ನೀಡಿತು. ಅದೇ ರೀತಿ ಗೋಕುಲರಾಜ್ ಅವರ ತಾಯಿ ಕೂಡ ಪ್ರಕರಣದಲ್ಲಿ ಐವರನ್ನು ಖುಲಾಸೆಗೊಳಿಸಿದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: ಮಾನನಷ್ಟ.. ವೆಬ್ ಸಿರೀಸ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಛೋಟಾ ರಾಜನ್ಗೆ ಸಿಗದ ತುರ್ತು ಪರಿಹಾರ