ಗ್ವಾಲಿಯರ್ (ಮಧ್ಯಪ್ರದೇಶ): ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಹೆಸರಲ್ಲಿ ತೆರೆಯಲಾಗಿದ್ದ ಗ್ರಂಥಾಲಯಕ್ಕೆ ಬೀಗ ಜಡಿಯಲಾಗಿದ್ದು, ಹಿಂದೂ ಮಹಾಸಭಾ ಕಚೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ನಿನ್ನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಾಥುರಾಮ್ ಗೋಡ್ಸೆಗೆ ಸಮರ್ಪಣವಾಗಿ ಅಖಿಲ ಭಾರತೀಯ ಹಿಂದೂ ಮಹಾಸಭಾವು ಗ್ರಂಥಾಲಯ ತೆರೆದಿತ್ತು. ದೇಶದ ವಿಭಜನೆಯನ್ನು ಗೋಡ್ಸೆ ಏಕೆ ವಿರೋಧಿಸಿದರು.
ಅದರ ವಿರುದ್ಧ ಏಕೆ ಪ್ರತೀಕಾರ ತೆಗೆದುಕೊಂಡರು ಎನ್ನುವುದನ್ನು ಯುವಜನತೆಗೆ ತಿಳಿಸುವ ಉದ್ದೇಶದಿಂದ ಈ ಅಧ್ಯಯನ ಕೇಂದ್ರ ತೆರೆಯಲಾಗಿದೆ ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ಹೇಳಿದ್ದರು.
ಇದನ್ನೂ ಓದಿ: ಗಾಂಧಿ ಹಂತಕ 'ಗೋಡ್ಸೆ' ಹೆಸರಲ್ಲಿ ಗ್ರಂಥಾಲಯ ತೆರೆದ ಹಿಂದೂ ಮಹಾಸಭಾ
ಆದರೆ, ಇದು ವ್ಯಾಪಕ ಚರ್ಚೆಗೆ ಕಾರಣವಾಗಿ, ಲೈಬ್ರರಿ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ವಿಚಾರ ಅಹಿತಕರ ಘಟನೆಗಳಿಗೆ ಎಡೆಮಾಡಿ ಕೊಡಬಹುದು ಎಂಬುದನ್ನು ಅರಿತ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ, ಮುನ್ನೆಚ್ಚರಿಕಾ ಕ್ರಮವಾಗಿ ಸದ್ಯಕ್ಕೆ ಗ್ರಂಥಾಲಯವನ್ನು ಮುಚ್ಚಲು ಹಾಗೂ ಸೆಕ್ಷನ್ 144 ಜಾರಿ ಮಾಡಲು ಆದೇಶ ನೀಡಿದ್ದಾರೆ. ಗೃಹ ಸಚಿವರ ಆದೇಶದ ಮೇರೆಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.