ಶಹಜಹಾನ್‌ಪುರ (ಉತ್ತರಪ್ರದೇಶ): ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸರ್ಕಾರಿ ಶಾಲಾ ಶಿಕ್ಷಕನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆರೋಪಿ ಶಿಕ್ಷಕನು ಕನಿಷ್ಠ 18 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ತಿಳಿದುಬಂದಿದೆ. ಘಟನೆಯ ನಂತರ ವಿದ್ಯಾರ್ಥಿನಿಯರು ಶಾಲೆಗೆ ಬರುವುದನ್ನು ನಿಲ್ಲಿಸಿದ್ದು, ಈ ಹಿನ್ನೆಲೆ ಸರ್ಕಾರಿ ಶಾಲೆಯ ಹಾಜರಾತಿ ಕನಿಷ್ಠ ಶೇ.35ಕ್ಕಿಂತ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಶಹಜಹಾನ್ ಪುರದ ದಾದ್ರಾಲ್ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ಸರ್ಕಾರಿ ಶಾಲಾ ಶಿಕ್ಷಕನೊಬ್ಬ ಹಲವು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಶಿಕ್ಷಕನ ಈ ಕುಕೃತ್ಯಕ್ಕೆ ಬೆಂಬಲ ನೀಡಿದ ಮುಖ್ಯೋಪಾಧ್ಯಾಯನನ್ನು ಮತ್ತು ಸಹಾಯಕ ಶಿಕ್ಷಕನ ವಿರುದ್ಧವೂ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಂಧಿತರನ್ನು ಆರೋಪಿಗಳನ್ನು ಕಂಪ್ಯೂಟರ್ ಶಿಕ್ಷಕ ಮೊಹಮ್ಮದ್ ಅಲಿ, ಸಹಾಯಕ ಶಿಕ್ಷಕ ಸೈಜಾ, ಮುಖ್ಯೋಪಾಧ್ಯಾಯರಾದ ಅನಿಲ್ ಪಾಠಕ್ ಎಂದು ಗುರುತಿಸಲಾಗಿದೆ. ಇದೇ ವೇಳೆ ಶಾಲೆಯ ಶೌಚಾಲಯದಲ್ಲಿ ಬಳಕೆ ಮಾಡಿರುವ ಕಾಂಡೋಮ್ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಮೇ 13ರಂದು ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಗ್ರಾಮಸ್ಥರು ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳು ಈ ಬಗ್ಗೆ ಹೇಳಿರದಿದ್ದರೇ ಇನ್ನೂ ದೌರ್ಜನ್ಯಗಳು ಮುಂದುವರೆಯುತ್ತಿದ್ದವು ಎಂದು ಪೋಷಕರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಅಧಿಕಾರಿ ಕುಮಾರ್ ಗೌರವ್, ಶಾಲೆಯಲ್ಲಿ ಒಟ್ಟು 112 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 50 ವಿದ್ಯಾರ್ಥಿನಿಯರಿದ್ದು, ಶೇ. 35 ವಿದ್ಯಾರ್ಥಿಗಳು ಸೋಮವಾರ ಶಾಲೆಗೆ ಹಾಜರಾಗಿದ್ದಾರೆ. ವಿದ್ಯಾರ್ಥಿನಿಯರು ಬೆದರಿರುವುದರಿಂದ ಶಾಲೆಗೆ ಆಗಮಿಸುವವರ ಸಂಖ್ಯೆ ಕಡಿಮೆಯಾಗಿದೆ. ಈ ವಿದ್ಯಾರ್ಥಿನಿಯರಿಗೆ ಮತ್ತು ಅವರ ಪೋಷಕರಿಗೆ ಧೈರ್ಯ ತುಂಬಲು ಕೌನ್ಸಿಲಿಂಗ್ ಮಾಡಲಾಗುತ್ತದೆ. ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೋಷಕರು, ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿಯರು ತಕ್ಷಣವೇ ಕಾಲೇಜಿಗೆ ಬರಲು ಹಿಂಜರಿಯುತ್ತಾರೆ. ಶಿಕ್ಷಕರ ಕುಕೃತ್ಯ ಅವರ ಮನಸ್ಸಿನ ಮೇಲೆ ಘಾಸಿಯನ್ನುಂಟು ಮಾಡಿದೆ. ಇದರಿಂದ ಹೊರಬರಲು ಸಮಯ ಹಿಡಿಯುತ್ತದೆ ಎಂದು ಹೇಳಿದರು.
ಉತ್ತರ ಪ್ರದೇಶದ ಶಾಲಾ ಶಿಕ್ಷಣ ಮಹಾನಿರ್ದೇಶಕ ವಿಜಯ್ ಕಿರಣ್ ಆನಂದ್ ಮಾತನಾಡಿ, ಇಂತಹ ಘಟನೆಗಳನ್ನು ಪರಿಶೀಲಿಸಲು ರಾಜ್ಯದ ಎಲ್ಲಾ 746 ಕಸ್ತೂರರ್ಬಾ ಗಾಂಧಿ ಬಾಲಿಕಾ ವಿದ್ಯಾಲಯಗಳಲ್ಲಿ (ಕೆಜಿಬಿವಿ) ಮಹಿಳಾ ಸಿಬ್ಬಂದಿ ನೇಮಿಸಲಾಗುತ್ತದೆ. 6 ರಿಂದ 8 ನೇ ತರಗತಿಯವರೆಗಿನ ವಸತಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯ ಸಚಿವ ಬಲದೇವ್ ಸಿಂಗ್ ಔಲಾಖ್ ಮಾತನಾಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಶಿಕ್ಷಕರು ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಅವರನ್ನು ಶಾಲೆಯಿಂದ ಹೊರ ಹಾಕಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : ಯುಪಿಯಲ್ಲಿ ಲವ್ ಜಿಹಾದ್ ಆರೋಪ.. ನ್ಯಾಯಾಲಯದ ಮೆಟ್ಟಿಲೇರಿದ ಸಂತ್ರಸ್ತೆ