ರಾಜ್ಕೋಟ್ (ಗುಜರಾತ್) : ಬಾಲ್ಯದಲ್ಲಿ ಇರುವಾಗ ಆನೇಕ ಚಿಕ್ಕ ಮಕ್ಕಳು ಹೆಚ್ಚಾಗಿ ಆಟವಾಡುವಾಗ ನಾಣ್ಯಗಳು ಹಾಗೂ ಇತರ ಚಿಕ್ಕ ಗಾತ್ರದ ವಸ್ತುಗಳನ್ನು ನುಂಗಿ ಸಮಸ್ಯಯಿಂದ ಪರಾಗಿರುವ ಎಷ್ಟೋ ಸನ್ನಿವೇಶಗಳನ್ನು ನೋಡಿದ್ದೇವೆ. ಸರಿಯಾಗಿ ಪೋಷಕರು ಮಕ್ಕಳ ಕಡೆ ಗಮನ ಹರಿಸದ ಕಾರಣ ಇಂತಹ ಘಟನೆಗಳು ಬೆಳಕಿಗೆ ಬರುತ್ತಿರುತ್ತವೆ. ಹೌದು ಗುಜರಾತ್ನ ರಾಜ್ಕೋಟ್ನಲ್ಲಿ ಶಿವಾನಿ ತ್ರಿವೇದಿ ಎಂಬ 10 ವರ್ಷದ ಬಾಲಕಿ ಆಟವಾಡುವಾಗ ತನ್ನ ಮೂಗಿಗೆ ರಬ್ಬರ್ ತುಂಡು ಹಾಕಿಕೊಂಡು ಬಾರಿ ಸಂಕಷ್ಟ ಎದುರಿಸಿದ ಘಟನೆಯೊಂದು ನಡೆದಿದೆ.
ಬಳಿಕ ಬಾಲಕಿ ಮೂಗು ಕಟ್ಟಿಕೊಂಡು ಉಸಿರಾಡಲು ಕಷ್ಟವಾಗಿದ್ದು, ಸ್ವಲ್ಪ ದಿನಗಳ ನಂತರ ಮೂಗಿನಿಂದ ದುರ್ವಾಸನೆಯ ದ್ರವ ಮತ್ತು ರಕ್ತ ಹೊರಬರಲು ಪ್ರಾರಂಭಿಸಿದೆ. ಇದ್ದರಿಂದ ಪೋಷಕರು ಮೊದಲು ಬಾಲಕಿಗೆ ಮನೆಯಲ್ಲೇ ಚಿಕಿತ್ಸೆ ನೀಡಿದ್ದಾರೆ. ಆದರೆ, ಇದರಿಂದ ಬಾಲಕಿ ಸಮಸ್ಯೆಯಲ್ಲಿ ಸುಧಾರಣೆ ಕಂಡು ಬರದ ಕಾರಣ ಪೋಷಕರು ಆತಂಕಕ್ಕೊಳಗಾಗಿ ಕಳೆದ ಮೂರು ತಿಂಗಳಿನಿಂದ ನೋವಿನಲ್ಲಿದ್ದ ಬಾಲಕಿಗೆ ಏನಾಗಿರಬಹುದೆಂದು ರಾಜ್‌ಕೋಟ್‌ನ ಇಎನ್‌ಟಿ(ಕಿವಿ, ಮೂಗು ಮತ್ತು ಗಂಟಲು) ವೈದ್ಯರ ಬಳಿಗೆ ಕರೆ ತಂದಿದ್ದರು.
ಇದೇ ಸಮಯದಲ್ಲಿ ಡಾ.ಹಿಮಾನ್ಶು ಠಕ್ಕರ್ ಅವರು ಬಾಲಕಿಯ ಮೂಗಿನಲ್ಲಿ ದುರ್ಬೀನು ಹಾಕಿ ಪರೀಕ್ಷಿಸಿದಾಗ, ಆಳವಾಗಿ ಏನೋ ಅಂಟಿಕೊಂಡಿರುವುದು ಕಂಡು ಬಂದಿತ್ತು. ಬಳಿಕ ಕೆಲವೇ ಗಂಟೆಗಳಲ್ಲಿ ಮೂಗಿನ ಒಳಗಿನ ಚರ್ಮದಲ್ಲಿ ಸಿಲುಕಿಕೊಂಡಿದ್ದ ವಸ್ತುವನ್ನು ಬೈನಾಕ್ಯುಲರ್‌ಗಳಿಂದ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಹೊರ ತೆಗೆಯಲಾಗಿದೆ. ಈ ಸಂದರ್ಭದಲ್ಲಿ ಬಾಲಕಿ ಮೂಗಿನೊಳಗೆ ರಬ್ಬರ್ ತುಂಡು ಇರುವುದನ್ನು ಕಂಡು ವೈದ್ಯರು ಮತ್ತು ಪೋಷಕರೂ ಬೆಚ್ಚಿಬಿದ್ದಿದ್ದಾರೆ. ಸದ್ಯ ವ್ಯೆದ್ಯರ ಈ ಸಾಹಸದಿಂದ ಪೋಷಕರು ನಿಟ್ಟುಸಿರು ಬಿಟ್ಟಿದ್ದು, ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವೈದ್ಯರು ಹೇಳುವುದೇನು?: ಇದೇ ವೇಳೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ ಡಾ.ಹಿಮಾನ್ಶು ಠಕ್ಕರ್ ಅವರು ಮಾತನಾಡಿ ರಬ್ಬರ್ಅನ್ನು ತೆಗೆಯುವಾಗ ಸಾಕಷ್ಟು ಕಾಳಜಿಯನ್ನು ವಹಿಸಿದ್ದವು. ಅಂತಿಮವಾಗಿ ಮಗುವಿನ ಮೂಗಿನಿಂದ ರಬ್ಬರ್ ಹೊರ ತೆಗೆದಿದ್ದೇವೆ ಎಂದರು. ಅಷ್ಟೇ ಅಲ್ಲ ಮೂಗಿನ ಹಿಂಭಾಗದ ಆಳದಲ್ಲಿ ಸಿಲುಕಿದರೆ ಹೆಚ್ಚು ಅಪಾಯಕ್ಕೆ ಕಾರಣವಾಗಬಹುದು, ಹೀಗಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸಬೇಕು. ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.
ಬರೋಬ್ಬರಿ 187 ನಾಣ್ಯ ನುಂಗಿ ಬದುಕುಳಿದಿದ್ದ ಭೂಪ : ಇಂತಹುದೇ ಪರಿಸ್ಥಿತಿ ಹೋಲುವ ಘಟನೆ ರಾಯಚೂರು ಜಿಲ್ಲೆಯ ಸಂತೆ ಕೆಲ್ಲೂರು ಗ್ರಾಮದಲ್ಲಿ ನಡೆದಿತ್ತು. ಇಲ್ಲಿನ ನಿವಾಸಿ 58 ವರ್ಷದ ದ್ಯಾಮಪ್ಪ ಹರಿಜನ ಎಂಬುವರು 187 ನಾಣ್ಯಗಳನ್ನು ನುಂಗಿದ್ದರು. ಸುಮಾರು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಆಗಾಗ ಮಧ್ಯ ಸೇವಿಸಿ ತನಗೆ ಗೊತ್ತಿಲ್ಲದಂತೆ ಒಂದು, ಎರಡು, ಐದು ರೂಗಳ ನಾಣ್ಯ ನುಂಗುತ್ತ ಬಂದಿದ್ದರು. ಕೊನೆಗೆ ಬರೋಬ್ಬರಿ 187 ನಾಣ್ಯಗಳು ಈತನ ಹೊಟ್ಟೆ ಸೇರಿದ್ದವು.
ಆದರೆ ಹೊಟ್ಟೆ ನೋವು ಆರಂಭವಾದಾಗ ದ್ಯಾಮಪ್ಪ ಮನೆಯವರಿಗೆ ತಿಳಿಸಿದ್ದರು. ಬಳಿಕ ರಾಯಚೂರಿನ ಖಾಸಗಿ ಆಸ್ಪತ್ರೆಗೆ ತೋರಿಸಿಲಾಗಿತ್ತು. ಅಲ್ಲಿಂದ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದ್ಯಾಮಪ್ಪನನ್ನು ಕರೆತರಲಾಗಿತ್ತು. ಎಕ್ಸ್ ರೆ, ಎಂಡೋಸ್ಕೊಪಿ ಮೂಲಕ ದ್ಯಾಮಪ್ಪನ ಪರೀಕ್ಷೆ ನಡೆಸಿದ ವೈದ್ಯರಿಗೆ ಅಚ್ಚರಿ ಆಗಿತ್ತು.
ನಾಣ್ಯಗಳು ಕರುಳಿಗೆ ಹೋಗದೇ, ನೇರವಾಗಿ ಹೊಟ್ಟೆ ಭಾಗಕ್ಕೆ ಹೋಗಿದ್ದರಿಂದ ವ್ಯಕ್ತಿಗೆ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಎಲ್ಲಾ ನಾಣ್ಯಗಳು ಸೇರಿ ಸುಮಾರು 1.2 ಕೆ.ಜಿ ತೂಕ ಇದ್ದು, ಗ್ಯಾಸ್ಟ್ರೋಟಾಮಿ ಎಂಬ ಚಿಕಿತ್ಸೆ ಮೂಲಕ ವೈದ್ಯರು ನಾಣ್ಯಗಳನ್ನು ಹೊರತೆಗೆದಿದ್ದರು. ಸುಮಾರು ಒಂದು ಗಂಟೆ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರಾದ ಡಾ. ಐಶ್ವರ ಕಲಬುರಗಿ, ಡಾ.ಪ್ರಕಾಶ ಕಟ್ಟಿಮನಿ, ಅವರವಳಿಕೆ ತಜ್ಞರಾದ ಡಾ.ಅರ್ಚನಾ, ಡಾ.ರೂಪಾ ಹುಲಕುಂದೆ ಅವರು ಈ ಅಪರೂಪದ ಶಸ್ತ್ರ ಚಿಕಿತ್ಸೆಯಲ್ಲಿ ಯಶಸ್ಸು ಕಂಡಿದ್ದರು.
ಇದನ್ನೂ ಓದಿ :4 ತಿಂಗಳಿನಿಂದ ವೃದ್ಧನ ಹೊಟ್ಟೆಯೊಳಗೆ ಸಿಲುಕಿರುವ ಲೋಟ.. ಇಷ್ಟು ದಿನ ವಿಷಯ ಮುಚ್ಚಿಟ್ಟಿದ್ದು ಯಾಕೆ?