ನವದೆಹಲಿ: ಒಂದು ವಾರದ ಹಿಂದೆ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನಾಯಕತ್ವನ್ನು ಕಟುವಾಗಿ ಟೀಕಿಸಿ ಗುಲಾಂ ನಬಿ ಆಜಾದ್ ಕಾಂಗ್ರೆಸ್ ತೊರೆದಿದ್ದರು. ಇಂದು ಮತ್ತೆ ಅವರು ರಾಹುಲ್ ಗಾಂಧಿ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಅವರು ಒಳ್ಳೆಯ ಮನುಷ್ಯ. ಆದರೆ ರಾಜಕೀಯಕ್ಕೆ ಬೇಕಾದ ಗುಣಗಳನ್ನು ಆತ ಹೊಂದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದೇ ಆತನ ನೀತಿಯಾಗಿದೆ ಎಂದರು.
ಕಾಂಗ್ರೆಸ್ನ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಅರ್ಥಹೀನವಾಗಿದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಅವರ ಕಾಲದಲ್ಲಿ ನಡೆಯುತ್ತಿದ್ದ ಸಮಾಲೋಚನಾ ಪ್ರಕ್ರಿಯೆ ಈಗ ಅಲ್ಲಿ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೊದಲು ಸಿಡಬ್ಲ್ಯೂಸಿ ಸದಸ್ಯರು ಮಾತ್ರ ಇರುತ್ತಿದ್ದರು. ಕಳೆದ 10 ವರ್ಷಗಳಲ್ಲಿ 25 ಸಿಡಬ್ಲ್ಯೂಸಿ ಸದಸ್ಯರು ಮತ್ತು 50 ವಿಶೇಷ ಆಹ್ವಾನಿತರೂ ಸೇರಿದ್ದಾರೆ. 1998 ಮತ್ತು 2004 ರ ತನಕ ಸೋನಿಯಾ ಗಾಂಧಿ ಹಿರಿಯ ನಾಯಕರೊಂದಿಗೆ ಸಂಪೂರ್ಣವಾಗಿ ಸಮಾಲೋಚನೆ ನಡೆಸುತ್ತಿದ್ದರು. ಆದರೆ ರಾಹುಲ್ ಗಾಂಧಿ ಬಂದ ನಂತರ, 2004 ರಿಂದ, ಸೋನಿಯಾ ಅವರು ರಾಹುಲ್ ಗಾಂಧಿಯ ಮೇಲೆ ಹೆಚ್ಚು ಅವಲಂಬಿತರಾಗಲು ಪ್ರಾರಂಭಿಸಿದರು. ಆದ್ರೆ, ಅವರಿಗೆ ಇದೆಲ್ಲಾವನ್ನು ನಿಭಾಯಿಸುವ ಶಕ್ತಿ ಇಲ್ಲ ಎಂದು ಆಜಾದ್ ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್
ಸೋನಿಯಾ ಗಾಂಧಿಗೆ ನೀಡಿದ ಐದು ಪುಟಗಳ ರಾಜೀನಾಮೆ ಪತ್ರದಲ್ಲಿ, ಆಜಾದ್ 2014 ರ ಚುನಾವಣೆ ಸೋಲಿಗೆ ರಾಹುಲ್ ಗಾಂಧಿಯವರನ್ನು ದೂಷಿಸಿದ್ದರು. ರಾಹುಲ್ ವರ್ತನೆ ಚಿಕ್ಕ ಮಕ್ಕಳಂತಿದೆ. ಸ್ವಪಕ್ಷದಲ್ಲಿಯೇ ತಮ್ಮನ್ನು ಮೂಲೆಗುಂಪು ಮಾಡಿರುವ ಭಾವನೆ ತಮಗೆ ವ್ಯಕ್ತವಾಗುತ್ತಿದೆ ಎಂದು ಗುಲಾಂ ನಬಿ ಆಜಾದ್ ಬೇಸರಿಸಿದ್ದರು.