ಶ್ರೀನಗರ : ಅಂತಿಮ ಘಟ್ಟದ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರದಲ್ಲಿ ಎಂಟು ದಿನಗಳ ಕಾಲ ನಡೆಯುವ ನಿರೀಕ್ಷೆಯಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಜನಿ ಪಾಟೀಲ್ ಮಾಹಿತಿ ನೀಡಿದ್ದಾರೆ. ರಾಹುಲ್ ಗಾಂಧಿ ಜನವರಿ ಮೂರನೇ ವಾರದಲ್ಲಿ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ತಲುಪಲಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಮುಂದಿನ ತಿಂಗಳು ಜಮ್ಮು ಕಾಶ್ಮೀರಕ್ಕೆ ಪ್ರವೇಶಿಸಲಿರುವ ಭಾರತ್ ಜೋಡೋ ಯಾತ್ರೆಯ ಬಗ್ಗೆ ಅವರು ಮಾಹಿತಿ ನೀಡಿದರು. ಭಾರತ್ ಜೋಡೊ ಯಾತ್ರೆಯು ರಾಜಕೀಯ ಪ್ರೇರಿತವಾಗಿಲ್ಲ ಮತ್ತು ದೇಶದ ಒಳಿತಿಗಾಗಿ ಜನರನ್ನು ಒಗ್ಗೂಡಿಸಲು ನಡೆಸುತ್ತಿರುವ ಯಾತ್ರೆಗಾಗಿ ಎಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟಾಗುವಂತೆ ಅವರು ರಾಜಕೀಯ ನಾಯಕರಿಗೆ ಮನವಿ ಮಾಡಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆಗಾಗಿ ಅಂತಿಮ ಹಂತದ ಸಿದ್ಧತೆಗಳು ನಡೆದಿವೆ. ರಾಜ್ಯದಲ್ಲಿ ಎಂಟು ದಿನಗಳ ಕಾಲ ಯಾತ್ರೆ ನಡೆಯಲಿದ್ದು, ಇದರಲ್ಲಿ ರಾಹುಲ್ ಗಾಂಧಿ ನಾಲ್ಕು ದಿನ ಜಮ್ಮು ಮತ್ತು ನಾಲ್ಕು ದಿನ ಕಾಶ್ಮೀರದಲ್ಲಿ ಪಾದಯಾತ್ರೆ ನಡೆಸಲಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ರಜನಿ ಪಾಟೀಲ್ ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಇಲ್ಲಿ ನಿರುದ್ಯೋಗ ಉತ್ತುಂಗಕ್ಕೇರಿದೆ. ಪ್ರತಿ ನೇಮಕಾತಿಯೂ ಹಗರಣಗಳ ಸುಳಿಯಲ್ಲಿ ಸಿಲುಕಿ ಕಣಿವೆಯ ಜನತೆ ಆಡಳಿತದಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರ ಮರು ವಶಕ್ಕೆ ಇದು ಸಕಾಲ: ಕಾಂಗ್ರೆಸ್ ನಾಯಕ ರಾವತ್