ಲಖನೌ (ಉತ್ತರಪ್ರದೇಶ) : ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿಯಲ್ಲಿ ಮಾತನಾಡಲು ಜನರನ್ನು ಒತ್ತಾಯಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ಹೇಳಿಕೆಗಳು ಇಡೀ ದೇಶದಲ್ಲಿ ಬಲವಾದ ಪರ-ವಿರೋಧಗಳನ್ನು ಸೃಷ್ಟಿಸಿದ್ದು, ಕೆಲವರು ಬೆಂಬಲಿಸಿದರೆ ಇನ್ನೂ ಕೆಲವರು ಅದನ್ನು ಧಿಕ್ಕರಿಸಿದ್ದಾರೆ.
ಬಿಜೆಪಿ ತಕ್ಷಣದ ರಾಜಕೀಯ ಲಾಭಕ್ಕಾಗಿ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ದೇಶದ ಅಧಿಕೃತ ಭಾಷೆಯಾಗಿ ಹಿಂದಿ ಸಮಸ್ಯೆಯನ್ನು ಎತ್ತುತ್ತಿದೆ ಎಂಬುದಾಗಿ ಅನೇಕರು ಮಾತನಾಡುತ್ತಿದ್ದಾರೆ. ಈ ಎಲ್ಲಾ ಚರ್ಚೆಗಳ ಮಧ್ಯೆ, ಉತ್ತರಪ್ರದೇಶ ವಿಧಾನಸಭೆಯ ಮಾಜಿ ಸ್ಪೀಕರ್ ಮತ್ತು ಬಿಜೆಪಿಯ ಹಿರಿಯ ನಾಯಕ ಹೃದಯ್ ನಾರಾಯಣ ದೀಕ್ಷಿತ್ ಅವರು ಅಮಿತ್ ಶಾ ಅವರಿಗೆ ಪೂರಕವಾಗಿ ಹೇಳಿಕೆ ನೀಡಿದ್ದಾರೆ.
ಕೇಂದ್ರ ಗೃಹ ಸಚಿವರು ನಿಜವಾಗಿ ಹೇಳಿದ್ದು, ರಾಜ್ಯಗಳು ಸಂವಹನಕ್ಕಾಗಿ ಇಂಗ್ಲಿಷ್ ಬದಲಿಗೆ ಹಿಂದಿ ಬಳಸುವುದರ ಜೊತೆಗೆ ಆಯಾ ಸ್ಥಳೀಯ ಭಾಷೆಗಳಲ್ಲಿಯೂ ಮಾತನಾಡಬಹುದು ಎಂಬುದು. ಆದಾಗ್ಯೂ, ಹಿಂದಿಯಲ್ಲಿ ಮಾತನಾಡುವುದನ್ನು ಕೆಲವು ರಾಜ್ಯಗಳು ವಿರೋಧಿಸುತ್ತಿವೆ ಎಂದು ಹೇಳಿದ್ದಾರೆ.
ಹಿಂದಿ ಯಾವುದೇ ಸ್ಥಳೀಯ ಭಾಷೆಯೊಂದಿಗೆ ಸ್ಪರ್ಧಿಸುತ್ತಿಲ್ಲ ಎಂಬುದನ್ನು ಸಾಮಾಜಿಕ ಕಾರ್ಯಕರ್ತರು ಮತ್ತು ದೇಶದ ಇತರ ಖ್ಯಾತ ವಿದ್ವಾಂಸರು ಜನರಿಗೆ ತಿಳಿಸಬೇಕು. ಹಿಂದಿ ಮತ್ತು ಭಾರತೀಯ ಭಾಷೆಗಳು ಒಂದೇ ಕುಟುಂಬಕ್ಕೆ ಸೇರಿವೆ. ಸಂವಿಧಾನ ಸಭೆಯಲ್ಲಿ ದೇಶದ ಅಧಿಕೃತ ಭಾಷೆಯನ್ನು ಘೋಷಿಸುವ ಪ್ರಸ್ತಾಪವನ್ನು ಮಂಡಿಸಿದಾಗ, ಈ ಪ್ರಸ್ತಾಪದ ಪ್ರತಿಪಾದಕರಾದ ಅಯ್ಯಂಗಾರ್ ಅವರು ಹಿಂದಿಯನ್ನು ದೇಶದ ಅಧಿಕೃತ ಭಾಷೆಯಾಗಿ ಘೋಷಿಸಲು ಬಯಸುವುದಾಗಿ ಹೇಳಿದ್ದರು. ಆದರೆ, ಹಾಗೆ ಮಾಡಲು ಇದು ಸರಿಯಾದ ಸಮಯವಲ್ಲ ಎಂಬುದಾಗಿಯೂ ಅವರು ಹೇಳಿದ್ದರು ಎಂದು ಅವರು ಹೇಳಿದರು.
ಆ ಸಮಯದಲ್ಲಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಇಂಗ್ಲಿಷ್ ಅನ್ನು ಆದ್ಯತೆಯ ಭಾಷೆಯಾಗಿ ಒಪ್ಪಿಕೊಂಡು, ಹಿಂದಿ ನಮ್ಮ ದೇಶದ ಭಾಷೆ ಮತ್ತು ಅದನ್ನು ನಾವು ಸಂವಿಧಾನ ಸಭೆಯಲ್ಲಿ ಉತ್ತಮವಾಗಿ ದಾಖಲಿಸಬೇಕು ಎಂದು ಹೇಳಿದ್ದರು. ಹಿಂದಿ ದೇಶದ ಅಧಿಕೃತ ಭಾಷೆಯಾಗಿದೆ. ಅದನ್ನು ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವುದು ರಾಷ್ಟ್ರ ಮತ್ತು ರಾಜ್ಯದ ಜವಾಬ್ದಾರಿಯಾಗಿದೆ ಎಂದರು.
ಕಾಂಗ್ರೆಸ್ ವಕ್ತಾರ ಸುಧಾಂಶು ಬಾಜಪೇಯ್ ಮಾತನಾಡಿ, ಯಾವುದೇ ರಾಜ್ಯಗಳಲ್ಲಿ ಹಿಂದಿ ಹೇರುವುದರಲ್ಲಿ ಅರ್ಥವಿಲ್ಲ. ಅಧಿಕೃತ ಭಾಷೆಯನ್ನು ಬಳಸುವ ಸಲಹೆಯನ್ನು "ಸಾಂಸ್ಕೃತಿಕ ಭಯೋತ್ಪಾದನೆ" ಎಂದು ಕರೆಯುವವರ ಜ್ಞಾನದ ಬಗ್ಗೆ ನನಗೆ ಕರುಣೆ ಇದೆ. ಸರಳ ಭಾಷಣ ಅಥವಾ ವಾಕ್ಚಾತುರ್ಯದಿಂದ ಹಿಂದಿ ಶ್ರೀಮಂತವಾಗುವುದಿಲ್ಲ. ಹೇರಿಕೆಯಿಂದ ಪ್ರೋತ್ಸಾಹ ಸಿಗುವುದಿಲ್ಲ. ಹಾಗಾಗಬೇಕಾದರೆ, ಹಿಂದಿಯನ್ನು ಉದ್ಯೋಗ ಕ್ಷೇತ್ರಗಳಲ್ಲಿ, ಪ್ರಪಂಚ ಜ್ಞಾನದೊಂದಿಗೆ ಅಳವಡಿಸಬೇಕು. ಇದು ನನ್ನ ಪ್ರಾಯೋಗಿಕ ಸಲಹೆ ಎಂದರು.
ಭಾರತದಲ್ಲಿ ವಿಭಿನ್ನ ಉಪಭಾಷೆಗಳಿವೆ, ನಮ್ಮ ಅಸ್ಮಿತೆಯ ಭಾಗವಾಗಿರುವ ಭಾಷೆಗಳಿವೆ, ಅದನ್ನು ಕೆಡಿಸುವುದು ಸರಿಯಲ್ಲ. ಬಿಜೆಪಿ ಈಗಾಗಲೇ ಆಹಾರದ ಬಗ್ಗೆ ಚರ್ಚೆಯನ್ನು ಎತ್ತಿದೆ. ಇಂದು ಭಾಷೆಯ ಬಗ್ಗೆ ಮಾತನಾಡುತ್ತಿರುವ ಅವರು ನಾಳೆ ಧೋತಿ-ಕುರ್ತಾವನ್ನು ಮಾತ್ರ ಧರಿಸುವಂತೆ ಜನರಿಗೆ ಹೇಳುತ್ತಾರೆ. ಸಂವಿಧಾನ ನಮಗೆ ಅಭಿವ್ಯಕ್ತಿ, ಆಹಾರ ಮತ್ತು ಬಟ್ಟೆಯ ಸ್ವಾತಂತ್ರ್ಯ ನೀಡಿದೆ. ಈ ನಿರ್ಣಾಯಕ ವಿಷಯಗಳಲ್ಲಿ ಜನರನ್ನು ವಿಭಜಿಸುವ ರಾಜಕೀಯವನ್ನು ಬಿಜೆಪಿ ಮಾಡಬಾರದು ಎಂದರು.
ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ಅಲಿ ಖಾನ್ ಮಾತನಾಡಿ, ದೇಶದಲ್ಲಿ ಕೇವಲ 43 ಪ್ರತಿಶತದಷ್ಟು ಜನರ ಸ್ಥಳೀಯ ಭಾಷೆ ಹಿಂದಿ, ಆದ್ದರಿಂದ ಅದನ್ನು ಎಲ್ಲಾ ಜನರ ಮೇಲೆ ಬಲವಂತವಾಗಿ ಹೇರುವುದು ಅನ್ಯಾಯ. ಭಾರತದ ಎಲ್ಲಾ ಭಾಷೆಗಳು ಸಮಾನವಾಗಿವೆ. ವಾಸ್ತವವಾಗಿ ಈ ಹೋರಾಟ ಭಾಷೆಯ ಆಧಾರದ ಮೇಲೆ ಅಲ್ಲ. ಆದರೆ, ಬಿಜೆಪಿ ಇಂತಹ ನಡೆಯ ಮೂಲಕ ತನ್ನ ಚುನಾವಣಾ ತಂತ್ರವನ್ನು ಸಿದ್ಧಪಡಿಸುತ್ತಿದೆ.
ಭಾಷೆ, ಧರ್ಮ, ಸಂಸ್ಕೃತಿಯ ಮೇಲೆ ರಾಜಕೀಯ ಮಾಡುವ ಮೂಲಕ ಬಿಜೆಪಿ ವೈವಿದ್ಯತೆಯಲ್ಲಿ ಏಕತೆ ಎಂಬ ಭಾರತದ ಗುರುತಿನ ವಿರೋಧ ಹೋಗುತ್ತಿದೆ ಎಂದು ಹೇಳಿದರು. ಖ್ಯಾತ ಸಾಹಿತಿ ಮತ್ತು ವಿಮರ್ಶಕ ವೀರೇಂದ್ರ ಯಾದವ್ ಅವರು, ಅಮಿತ್ ಶಾ ಅವರ ಹಿಂದಿಯೇತರ ಪ್ರದೇಶಗಳ ಜನರು ಹಿಂದಿಯಲ್ಲಿ ಸಂವಹನ ನಡೆಸಬೇಕು ಎಂಬ ಹೇಳಿಕೆಯನ್ನು ಖಂಡಿಸಿದ್ದಾರೆ.
ದಕ್ಷಿಣ ಭಾರತ ಅಥವಾ ಹಿಂದಿಯೇತರ ರಾಜ್ಯಗಳಲ್ಲಿ ಇದು ಟೀಕೆಗೆ ಗುರಿಯಾಗಬೇಕಾಗುತ್ತದೆ. ಏಕೆಂದರೆ, ಮಲಯಾಳಂ ಮಾತನಾಡುವ ವ್ಯಕ್ತಿ ತಮಿಳು ಭಾಷಿಕರೊಂದಿಗೆ ಮಲಯಾಳಂ ಅಥವಾ ತಮಿಳಿನಲ್ಲಿ ಮಾತನಾಡಲು ಸಾಧ್ಯವಾಗುತ್ತದೆ ಎಂಬ ಮಾತ್ರಕ್ಕೆ ಅವರ ಮೇಲೆ ಹಿಂದಿಯನ್ನು ಹೇರುವುದು. ಅವರ ಭಾಷಾ ಸ್ವಾತಂತ್ರ್ಯದ ಮೇಲೆ ಅನಗತ್ಯ ಅತಿಕ್ರಮಣವಾದಂತೆ. ಭಾರತದಂತಹ ದೇಶದಲ್ಲಿ ಯಾವುದೇ ಒಂದು ಭಾಷೆಯ ಪ್ರಾಬಲ್ಯವನ್ನು ಇನ್ನೊಂದು ಭಾಷೆಯ ಮೇಲೆ ಹೇರಿದರೆ ಅದು ದೇಶದ ಏಕತೆ ಮತ್ತು ಸಮಗ್ರತೆಗೆ ಕೊಡುವ ಪೆಟ್ಟು ಎಂದರು.
ಇದನ್ನೂ ಓದಿ: ಸೋಲಿಗೆ ಕಾರಣ ಹುಡುಕುತ್ತಿರುವ ಪ್ರತಿಪಕ್ಷಗಳು: ವಿಧಾನಸಭಾ ಚುನಾವಣೆ ಸಿದ್ಧತೆಯಲ್ಲಿ ಬಿಜೆಪಿ