ನವಾದಾ(ಬಿಹಾರ): ವಾಸಯೋಗ್ಯ ಮನೆ, ಕಾಲೇಜಿಗೆ ತೆರಳಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತರಬೇತಿ ಪಡೆದರೂ ಐಐಟಿ-ಜೆಎಎಂನಂತಹ ಕಠಿಣ ಪರೀಕ್ಷೆ ಪಾಸ್ ಮಾಡಲು ಅನೇಕ ವಿದ್ಯಾರ್ಥಿಗಳಿಗೆ ಸಾಧ್ಯವಾಗುವುದಿಲ್ಲ. ಆದರೆ, ಬಿಹಾರದ ಯುವಕನೊಬ್ಬ ಜೈಲಿನಲ್ಲಿ ಇದ್ದುಕೊಂಡು ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ಅಚ್ಚರಿ ಮೂಡಿಸಿದ್ದಾನೆ.
ಬಿಹಾರದ ನವಾದಾನಲ್ಲಿರುವ ವಿಚಾರಣಾಧೀನ ಕೈದಿ ಕೌಶಲೇಂದ್ರ ಕುಮಾರ್ ಈ ಸಾಧನೆ ಮಾಡಿದವನು. ಈತ ಜೈಲಿನಲ್ಲಿದ್ದುಕೊಂಡು ಐಐಟಿ-ಜೆಎಎಂ ಪರೀಕ್ಷೆ ಪಾಸ್ ಮಾಡುವುದರ ಜೊತೆಗೆ ದೇಶಕ್ಕೆ 54ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. 22 ವರ್ಷದ ಕೌಶಲೇಂದ್ರ ಕುಮಾರ್ ಅಲಿಯಾಸ್ ಸೂರಜ್ ಅಪರಾಧ ಕೃತ್ಯವೊಂದರಲ್ಲಿ ಸಿಲುಕಿ ಜೈಲಿನಲ್ಲಿದ್ದು, ವಿಚಾರಣಾಧೀನ ಕೈದಿಯಾಗಿದ್ದಾನೆ.
![Kaushlendra Kumar IIT](https://etvbharatimages.akamaized.net/etvbharat/prod-images/14825678_thumbn.jpg)
ಇದನ್ನೂ ಓದಿ: 'ದೇವಭೂಮಿ'ಗೆ ಮೊದಲ ಮಹಿಳಾ ಸ್ಪೀಕರ್.. ರಿತು ಖಂಡೂರಿಗೆ ಬಿಜೆಪಿ ಹೈಕಮಾಂಡ್ ಮಣೆ!
ಕೊಲೆ ಕೇಸ್ಗೆ ಸಂಬಂಧಿಸಿದಂತೆ ಕಳೆದ 11 ತಿಂಗಳಿಂದಲೂ ಕೌಶಲೇಂದ್ರ ಕುಮಾರ್ ಜೈಲಿನಲ್ಲಿದ್ದಾನೆ. 2021ರ ಏಪ್ರಿಲ್ ತಿಂಗಳಲ್ಲಿ 45 ವರ್ಷದ ಸಂಜಯ್ ಯಾದವ್ ಮೇಲೆ ಹಲ್ಲೆ ನಡೆದಿತ್ತು. ಪರಿಣಾಮ ಆತ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಶಲೇಂದ್ರ ಕುಮಾರ್ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹೀಗಾಗಿ, ಈತನನ್ನು ಜೈಲಿನಲ್ಲಿಡಲಾಗಿದೆ.
ಇತ್ತೀಚೆಗಷ್ಟೇ ಐಐಟಿ ಫಲಿತಾಂಶ ಪ್ರಕಟಗೊಂಡಿದ್ದು, ಸೂರಜ್ 54ನೇ ಸ್ಥಾನ ಪಡೆದುಕೊಂಡಿದ್ದಾನೆ. ಜೈಲಿನಲ್ಲಿದ್ದುಕೊಂಡೇ ಕಠಿಣ ಅಧ್ಯಯನ ನಡೆಸಿ, ಈ ಸಾಧನೆ ಮಾಡಿದ್ದು ತನ್ನ ಗ್ರಾಮಕ್ಕೆ ಹೆಮ್ಮೆ ತಂದಿದ್ದಾನೆ. ತನ್ನ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಆತ, 'ನನಗೆ ವಿಜ್ಞಾನಿ ಆಗಬೇಕು ಎಂಬ ಕನಸಿದೆ. ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ್ದೇನೆ. ನನ್ನ ಯಶಸ್ಸು ಮಾಜಿ ಜೈಲು ಅಧೀಕ್ಷಕ ಅಭಿಷೇಕ್ ಕುಮಾರ್ ಪಾಂಡೆ ಅವರಿಗೆ ಸಲ್ಲಬೇಕು' ಎಂದಿದ್ದಾನೆ.