ಬೆಗುಸರಾಯ್(ಬಿಹಾರ): 'ಕಡಲ ದಾಟಿ ಬಂದ, ಕುದುರೆ ಏರಿ ಬಂದ, ನಿನ್ನ ಹೃದಯದ ಚೋರ...' ಎಂಬ ಜನಪ್ರಿಯ ಸಿನಿಮಾ ಹಾಡು ಕೇಳಿದ್ದೇವೆ. ಇಲ್ಲೋರ್ವ ಯುವತಿ ಭಾರತೀಯ ವರನ ಕೈ ಹಿಡಿಯಲು ತನ್ನ ಕುಟುಂಬದೊಂದಿಗೆ ಏಳು ಸಮುದ್ರ ದಾಟಿ ಭಾರತಕ್ಕೆ ಬಂದಿದ್ದಾಳೆ.
ಪ್ರೀತಿ ಮೊಳಕೆಯೊಡೆದಿದ್ದು ಹೀಗೆ..
ದೆಹಲಿಯಲ್ಲಿ ವಾಸವಿರುವ ರಾಕೇಶ್ ಕುಮಾರ್ ಮೂಲತಃ ಬಿಹಾರದ ಬೆಗುಸರಾಯ್ನವರು. ಭಾರತದ ವಿವಿಧ ಭಾಗಗಳಲ್ಲಿ ಪ್ರವಾಸಿ ಮಾರ್ಗದರ್ಶಿಯಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಸುಮಾರು ಆರು ವರ್ಷಗಳ ಹಿಂದೆ ಫ್ರಾನ್ಸ್ ಯುವತಿ ಮೇರಿ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಸ್ನೇಹ ಅಂಕುರಿಸಿದೆ. ಮೇರಿ ಭಾರತದಿಂದ ಸ್ವದೇಶಕ್ಕೆ ಮರಳಿದ ನಂತರವೂ ಕೂಡ ಇವರ ನಡುವೆ ಸಂಭಾಷಣೆ ನಡೆಯುತ್ತಿತ್ತು. ಈ ಗೆಳೆತನ ದಿನ ಕಳೆದಂತೆ ಪ್ರೀತಿಗೆ ತಿರುಗಿದೆ.
ಇದನ್ನೂ ಓದಿ: ವಿಡಿಯೋ ವೈರಲ್: ಹಳಿ ಮೇಲೆ ವಿಡಿಯೋ ಮಾಡ್ತಿದ್ದಾಗ ಅವಘಡ.. ರೈಲಿಗೆ ಸಿಲುಕಿ ಯುವಕ ದುರ್ಮರಣ
ಕಳೆದ ಮೂರು ವರ್ಷಗಳ ಹಿಂದೆ ರಾಕೇಶ್ ಫ್ರಾನ್ಸ್ ರಾಜಧಾನಿ ಪ್ಯಾರಿಸ್ಗೆ ಹೋಗಿ ಮೇರಿ ಜೊತೆ ಜವಳಿ ವ್ಯಾಪಾರ ಆರಂಭಿಸಿದ್ದಾರೆ. ಇದು ಇವರಿಗೆ ಒಬ್ಬರನ್ನೊಬ್ಬರು ಇನ್ನೂ ಹೆಚ್ಚು ಅರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಬಳಿಕ ತಾವು ಪ್ರೀತಿಸುತ್ತಿರುವ ವಿಚಾರವನ್ನು ಇಬ್ಬರೂ ಕುಟುಂಬಸ್ಥರಿಗೂ ತಿಳಿಸಿದ್ದಾರೆ. ಮೇರಿಯ ಕುಟುಂಬಸ್ಥರು ಒಪ್ಪಿಗೆ ಸೂಚಿಸಿ, ಪ್ಯಾರಿಸ್ನಲ್ಲೇ ಮದುವೆಗೆ ನಿರ್ಧರಿಸಿದ್ದರು. ಆದರೆ ಮೇರಿಗೆ ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿ ಅಂದ್ರೆ ಅಚ್ಚುಮೆಚ್ಚು. ಈ ಕಾರಣಕ್ಕೆ ತಾನು ಇಷ್ಟಪಟ್ಟಿರುವ ಭಾರತದ ಹಳ್ಳಿ ಪ್ರದೇಶದಲ್ಲೇ ಮದುವೆ ಮಾಡಲು ಉಭಯ ಕುಟುಂಬದವರು ಒಪ್ಪಿಗೆ ಸೂಚಿಸಿದ್ದಾರೆ.
ಭಾನುವಾರ ರಾತ್ರಿ ಭಗವಾನ್ಪುರದ ಕಠಾರಿಯಾ ಎಂಬಲ್ಲಿ ಹಿಂದೂ ಧಾರ್ಮಿಕ ಪದ್ಧತಿಯಂತೆ ಇಬ್ಬರ ಮದುವೆ ನಡೆಯಿತು. ಈ ಸಂದರ್ಭದಲ್ಲಿ ಎರಡೂ ಕಡೆಯ ಕುಟುಂಬಸ್ಥರು ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಾರೆ. ವಿದೇಶಿ ಹುಡುಗಿಯ ಜೊತೆ ಭಾರತೀಯ ಯುವಕ ಮದುವೆಯಾಗುತ್ತಿದ್ದಾನೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಸುತ್ತಮುತ್ತಲಿನ ಹಳ್ಳಿಯ ಜನರೂ ಕೂಡಾ ಆಗಮಿಸಿ ಶುಭ ಕೋರಿದರು.
ಮೇರಿ ಕುಟುಂಬಸ್ಥರು ಮಾತನಾಡಿ, ಭಾರತೀಯ ಆಚಾರ-ವಿಚಾರ, ಸಂಪ್ರದಾಯದ ಬಗ್ಗೆ ಅಪಾರ ಪ್ರೀತಿ ಅಭಿಮಾನ ವ್ಯಕ್ತಪಡಿಸಿದರು.