ಹೈದರಾಬಾದ್ (ತೆಲಂಗಾಣ): ಮೂರು ಬೀದಿ ನಾಯಿಗಳು ಒಟ್ಟಿಗೆ ನಾಲ್ಕು ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಸಾಯಿಸಿರುವ ಘಟನೆ ತೆಲಂಗಾಣ ರಾಜಧಾನಿ ಹೈದರಾಬಾದ್ನಲ್ಲಿ ನಡೆದಿದೆ. ಈ ಬೀದಿ ನಾಯಿಗಳ ಭೀಕರ ದಾಳಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿವೆ. ಪ್ರದೀಪ್ ಎಂಬ ಬಾಲಕನೇ ನಾಯಿಗಳ ದಾಳಿಗೆ ಬಲಿಯಾಗಿದ್ದಾನೆ.
ಘಟನೆಯ ವಿವರ: ನಿಜಾಮಾಬಾದ್ ಜಿಲ್ಲೆಯ ಇಂದಲವಾಯಿ ಮಂಡಲದ ಗಂಗಾಧರ್ ಎಂಬುವವರ ಕುಟುಂಬ ಉದ್ಯೋಗಕ್ಕಾಗಿ ಕಳೆದ ನಾಲ್ಕು ವರ್ಷಗಳ ಹಿಂದೆ ಹೈದರಾಬಾದ್ಗೆ ಬಂದು ನೆಲೆಸಿತ್ತು. ಇಲ್ಲಿನ ಬಾಗ್ ಅಂಬರ್‌ಪೇಟ್‌ನ ಎರುಕುಲ ಬಸ್ತಿಯಲ್ಲಿ ಪತ್ನಿ ಜನಪ್ರಿಯಾ, ಎಂಟು ವರ್ಷದ ಮಗಳು ಹಾಗೂ ಪುತ್ರ ಪ್ರದೀಪ್ ಸಮೇತವಾಗಿ ಗಂಗಾಧರ್ ವಾಸವಾಗಿದ್ದಾರೆ. ನಂಬರ್ 6ರ ಚೌರಸ್ತಾದಲ್ಲಿರುವ ಕಾರು ಸರ್ವೀಸ್ ಸೆಂಟರ್ನಲ್ಲಿರುವ ಕಾರ್ ಸರ್ವೀಸ್ ಸೆಂಟರ್ನಲ್ಲಿ ಗಂಗಾಧರ್ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ರಜೆ ದಿನವಾಗಿದ್ದರಿಂದ ತಾನು ಕೆಲಸ ಮಾಡುತ್ತಿದ್ದ ಸೆಂಟರ್ಗೆ ಮಕ್ಕಳನ್ನು ಇವರು ಕರೆದುಕೊಂಡು ಬಂದಿದ್ದರು.
ಈ ವೇಳೆ ಮಗಳನ್ನು ಪಾರ್ಕಿಂಗ್ ಲಾಟ್‌ನ ಕ್ಯಾಬಿನ್‌ನಲ್ಲಿ ಕೂರಿಸಿದ್ದರು. ಮಗ ಪ್ರದೀಪ್ನನ್ನು ಸರ್ವೀಸ್ ಸೆಂಟರ್ ಒಳಗೆ ಕರೆದೊಯ್ದಿದ್ದರು. ಆಗ ಪ್ರದೀಪ್ ಆಟವಾಡುತ್ತಿದ್ದ. ಇತ್ತ, ತಂದೆ ಗಂಗಾಧರ್ ಮತ್ತೊಬ್ಬ ವಾಚ್‌ಮನ್ ಜೊತೆ ಕೆಲಸದ ನಿಮಿತ್ತ ಬೇರೆ ಕಡೆ ತೆರಳಿದ್ದರು. ಸ್ವಲ್ಪ ಹೊತ್ತು ಆಟವಾಡಿದ ನಂತರ ಪ್ರದೀಪ್ ತನ್ನ ಅಕ್ಕನನ್ನು ಹುಡುಕಿಕೊಂಡು ಕ್ಯಾಬಿನ್ ಕಡೆಗೆ ಬಂದಿದ್ದಾನೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಬೀದಿ ನಾಯಿ ದಾಳಿ: ಇಬ್ಬರು ಮಕ್ಕಳ ಸಾವು
ರಸ್ತೆಯಲ್ಲಿ ಕಾಯುತ್ತಿದ್ದ ನಾಯಿಗಳು: ಬಾಲಕ ಪ್ರದೀಪ್ ಅಕ್ಕನನ್ನು ಹುಡುಕಿಕೊಂಡು ರಸ್ತೆಗೆ ಬರುತ್ತಿದ್ದಂತೆ ಮೂರು ನಾಯಿಗಳು ಹಠಾತ್ ದಾಳಿ ಮಾಡಿವೆ. ನಡೆದುಕೊಂಡು ಹೋಗುತ್ತಿರಬೇಕಾದರೆ ಹಿಂದಿನಿಂದ ಬಂದ ಮೂರೂ ನಾಯಿಗಳು ಕೂಡ ಸುತ್ತುವರಿದು ಕಚ್ಚಲು ಆರಂಭಿಸಿದೆ. ಅವುಗಳಿಂದ ಬಚಾವ್ ಆಗಲು ಬಾಲಕ ಪ್ರಯತ್ನಿಸುತ್ತಾನೆ. ಆದರೆ, ನಾಯಿಗಳು ಟಿ - ಶರ್ಟ್ ಹಿಡಿದು ಎಳೆದಾಡಿ ನೆಲಕ್ಕೆ ಬೀಳಿಸಿ ಬರ್ಬರವಾಗಿ ದಾಳಿ ಮಾಡಿವೆ. ರಾಕ್ಷಿಸಿ ನಾಯಿಗಳು ದಾಳಿಯ ಭೀಕರತೆ ಹೇಗಿತ್ತು ಎಂದರೆ ಬಾಲಕನ ಕಾಲು ಹಾಗೂ ಕೈಯನ್ನು ಹಿಡಿದು ಕಚ್ಚಿ ಒಂದೆಡೆ ಎಳೆದಾಡಿವೆ. ಇಡೀ ದೃಶ್ಯಗಳು ಸ್ಥಳೀಯ ಸಿಸಿವಿಟಿಯಲ್ಲಿ ಸೆರೆಯಾಗಿವೆ.
ಮತ್ತೊಂದೆಡೆ, ಪ್ರದೀಪ್ನ ಚೀರಾಟ ಕೇಳಿಸಿಕೊಂಡ ಆತನ ಸಹೋದರಿ ಓಡಿ ಬಂದಿದ್ದಾಳೆ. ನಂತರ ಈ ನಾಯಿಗಳ ಬಗ್ಗೆ ತಂದೆಗೆ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ತಂದೆ ಗಂಗಾಧರ ನಾಯಿಗಳ ದಾಳಿಯಿಂದ ಮಗನನ್ನು ರಕ್ಷಿಸಿದ್ದಾರೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲೇ ಬಾಲಕ ಪ್ರದೀಪ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಗುಜರಾತ್: ನಾಯಿ ದಾಳಿಯಿಂದ 4 ವರ್ಷದ ಮಗು ಸಾವು
ವಿಜಯನಗರ ಜಿಲ್ಲೆಯಲ್ಲಿ ಹುಚ್ಚು ನಾಯಿ ದಾಳಿ: ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಆರು ಜನರ ಮೇಲೆ ಹುಚ್ಚು ನಾಯಿಯೊಂದು ದಾಳಿ ಮಾಡಿದ ಘಟನೆ ನಡೆದಿದೆ. ಇಲ್ಲಿನ 12ನೇ ವಾರ್ಡ್ ವ್ಯಾಪ್ತಿಯಲ್ಲಿರುವ ನವೋದಯ ಕೋಚಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಐವರು ವಿದ್ಯಾರ್ಥಿಗಳು ಸೇರಿದಂತೆ ಹಲವರ ಮೇಲೆ ಹುಚ್ಚು ನಾಯಿ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಗಾಯಗೊಂಡ ಆರು ಜನರನ್ನು ಹೊಸಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.