ಶ್ರೀನಗರ(ಜಮ್ಮು-ಕಾಶ್ಮೀರ): ನಾಳೆ ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗುವುದು. ಇದರ ಬೆನ್ನಲ್ಲೇ ದೊಡ್ಡ ಮಟ್ಟದ ದಾಳಿ ನಡೆಸಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ಜೈಷ್ - ಇ - ಮೊಹಮ್ಮದ್ ಉಗ್ರ ಸಂಘಟನೆಯ ನಾಲ್ವರು ಭಯೋತ್ಪಾದಕರ ಬಂಧನ ಮಾಡಲಾಗಿದೆ. ಜಮ್ಮು - ಕಾಶ್ಮೀರದ ಪೊಲೀಸರು ಇವರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಶ್ಮೀರದ ವಿವಿಧ ಅಡಗುತಾಣಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ನಾಲ್ವರು ಉಗ್ರರ ಬಂಧನ ಮಾಡಿದ್ದು, ಈ ಮೂಲಕ ದೊಡ್ಡ ಪ್ರಮಾಣದ ವಿಧ್ವಂಸಕ ಕೃತ್ಯ ತಪ್ಪಿಸಿದ್ದಾರೆ. ಪೊಲೀಸರು ತಿಳಿಸಿರುವ ಮಾಹಿತಿ ಪ್ರಕಾರ ಇವರೆಲ್ಲರೂ ಸ್ವಾತಂತ್ರ್ಯ ದಿನದಂದು ದೊಡ್ಡ ಪ್ರಮಾಣದ ದಾಳಿ ನಡೆಸಲು ಯೋಜನೆ ಹಾಕಿಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿರಿ: ಸ್ವಾತಂತ್ರ್ಯೋತ್ಸವ: ಶೌರ್ಯ ಮೆರೆದ ಯೋಧರಿಗೆ ಅಶೋಕ್, ಕೀರ್ತಿ, ಶೌರ್ಯ ಚಕ್ರ ಘೋಷಣೆ
ಬಂಧಿತರನ್ನ ಪುಲ್ವಾಮಾ ನಿವಾಸಿ ಮಂಜೂರ್ ಅಹ್ಮದ್ ಭಟ್ ಅವರ ಪುತ್ರ ಮುಂಟಾಜೀರ್ ಮಂಜೂರ್, ಇರ್ಹಾನ್ ಖಾನ್, ಮೊಹಲ್ಲಾ ಶಾಮ್ಲಿ, ಅಹ್ಮದ್ ಶಾ ಬಂಧಿತ ಭಯೋತ್ಪಾದಕರಾಗಿದ್ದಾರೆ. ಇವರಿಂದ ಪಿಸ್ತೂಲ್, ಜೀವಂತ ಗುಂಡು ಹಾಗೂ ಕೆಲವೊಂದು ಗ್ರೆನೇಡ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಜೊತೆಗೆ ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರ ಸಾಗಿಸಲು ಬಳಸುತ್ತಿದ್ದ ಟ್ರಕ್ ಕೂಡ ವಶಪಡಿಸಿಕೊಳ್ಳಲಾಗಿದೆ.
ಜಮ್ಮು - ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ನಾಳೆ ದೊಡ್ಡ ಪ್ರಮಾಣದ ಸ್ಫೋಟ ಮಾಡಲು ಇವರು ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ. ಇವರೆಲ್ಲರೂ ಜೈಷ್ - ಇ - ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರು ಎಂದು ತಿಳಿದು ಬಂದಿದೆ.