ಮಹಾರಾಷ್ಟ್ರ: ಸಂಪ್ರದಾಯವನ್ನು ಮುರಿದು ನಾಲ್ಕು ಹೆಣ್ಣುಮಕ್ಕಳು ತಮ್ಮ ತಾಯಿಯ ಮೃತದೇಹವನ್ನು ಹೊತ್ತುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿದ್ದಾರೆ.
ಕೊರೊನಾ ಹಿನ್ನೆಲೆ ಅಂತ್ಯಕ್ರಿಯೆಯಲ್ಲಿ ಯಾರೂ ಕೂಡ ಹಾಜರಾಗದ ಕಾರಣ ಹೆಣ್ಣು ಮಕ್ಕಳೇ ಈ ಕೆಲಸ ಮಾಡಿ ಸಾಂಪ್ರದಾಯಿಕ ವ್ಯವಸ್ಥೆಗೆ ಎದುರೇಟು ಕೊಟ್ಟಿದ್ದಾರೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಈ ಘಟನೆ ಜರುಗಿದೆ.
ಮಗನಿಲ್ಲದ ತಾಯಿ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಹೆಣ್ಣುಮಕ್ಕಳು ಅಂತ್ಯಕ್ರಿಯೆಯನ್ನು ನಡೆಸಿದ್ದಾರೆ. ಹಾಗೆ ಕಿರಿಯ ಮಗಳು ಬೆಂಕಿ ಹಚ್ಚಿ ಅಂತಿಮ ಕಾರ್ಯ ನೆರವೇರಿಸಿದ್ದಾಳೆ.
ಏನಿದು ಘಟನೆ?
ಬೀಡ್ ಜಿಲ್ಲೆಯ ಶಿರೂರ್ ಕಸರ್ ತಾಲೂಕಿನ ಜಂಬ್ ಗ್ರಾಮದ ನಿವಾಸಿ ಲಕ್ಷ್ಮಿಬಾಯಿ ರಂಭೌ ಕಾಂಬ್ಳೆ ಎಂಬುವರು ಮೇ 20 ರಂದು ಮುಂಜಾನೆ 4 ಗಂಟೆಗೆ ನಿಧನರಾದರು.
ಆದರೆ, ಕೊರೊನಾ ಭಯದಿಂದ ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಜನರು ಸೇರಲು ಸಾಧ್ಯವಾಗಲಿಲ್ಲ. ಅದರಲ್ಲೂ ಆಕೆಯ ಶವ ಹೊರಲು ಕೂಡ ಯಾರೂ ಮುಂದೆ ಬರಲಿಲ್ಲ.
ಲಕ್ಷ್ಮಿಬಾಯಿಯ 4 ಹೆಣ್ಣುಮಕ್ಕಳಾದ ಸುನೀತಾ ಕೇದಾರ್, ವಿಮಲ್ಬಾಯ್ ಕೇದಾರ್, ಶಶಿಕಲಾ ಕೇದಾರ್ ಮತ್ತು ಭೀಮಾಬಾಯಿ ಮೋರ್ ಎಂಬ ನಾಲ್ವರು ತಾಯಿಯ ಮೃತದೇಹಕ್ಕೆ ಭುಜ ಕೊಟ್ಟು ಅವರ ಋಣ ತೀರಿಸಿದ್ದಾರೆ.
ಕೊನೆಯ ಐದನೇ ಮಗಳಾದ ಶಾಕುಂತಲಾ ಸುತಾರ್ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ. ಹಳ್ಳಿಯಿಂದ ಕೆಲವೇ ಜನರು ಮತ್ತು ನಿಕಟ ಸಂಬಂಧಿಗಳು ಮಾತ್ರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು.
ಹಿಂದೆಂದೂ ನೋಡಿರದ ಅಂತ್ಯಕ್ರಿಯೆಯ ಮೆರವಣಿಗೆಗೆ ಗ್ರಾಮ ಮತ್ತು ಸುತ್ತಮುತ್ತಲಿನ ಜನರು ಪ್ರಶಂಸಿಸುತ್ತಿದ್ದಾರೆ. ಜೊತೆಗೆ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ.