ನವದೆಹಲಿ: ಏಷ್ಯಾದ ಅತ್ಯಂತ ಸುರಕ್ಷಿತ ಜೈಲೆಂದೇ ಪರಿಗಣಿಸಲ್ಪಟ್ಟಿರುವ ದೆಹಲಿಯ ತಿಹಾರ್ ಜೈಲಿನ ಮಾಜಿ ಡಿಜಿ ಸಂದೀಪ್ ಗೋಯಲ್ ಅವರನ್ನು ಅಮಾನತುಗೊಳಿಸಲಾಗಿದೆ. ಗೃಹ ಸಚಿವಾಲಯವು ಗೋಯಲ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಒಂದು ತಿಂಗಳ ಹಿಂದೆ ವಂಚನೆ ಪ್ರಕರಣದಲ್ಲಿ ಬಂಧಿತನಾದ ಸುಕೇಶ್ ಚಂದ್ರಶೇಖರ್ ಮಾಡಿದ್ದ ಆರೋಪ ಪ್ರಕರಣದಲ್ಲಿ ಸಂದೀಪ್ ಗೋಯಲ್ ಅವರನ್ನು ತಿಹಾರ್ ಜೈಲಿನ ಡಿಜಿ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಅಂದಿನಿಂದಲೂ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸೂಚನೆ ಇತ್ತು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಸಚಿವ ಸತ್ಯೇಂದ್ರ ಜೈನ್ ಹಣ ನೀಡಿದ್ದಾರೆ ಎಂದು ಸುಖೇಶ್ ಚಂದ್ರಶೇಖರ್ ಆರೋಪ ಮಾಡಿದ್ದರು. ಇದರೊಂದಿಗೆ ತಿಹಾರ್ ಜೈಲಿನ ಮಾಜಿ ಮಹಾನಿರ್ದೇಶಕ ಸಂದೀಪ್ ಗೋಯಲ್ ಅವರಿಗೆ 12.5 ಕೋಟಿ ರೂಪಾಯಿ ನೀಡಿರುವ ಬಗ್ಗೆಯೂ ಹೇಳಿದ್ದರು. ಸೌಲಭ್ಯ ಮತ್ತು ಭದ್ರತೆ ನೀಡುವ ನಿಟ್ಟಿನಲ್ಲಿ ಸಂದೀಪ್ ಗೋಯಲ್ ಅವರಿಗೆ ಹಣ ನೀಡಲಾಗಿದೆ ಎಂದು ಸುಕೇಶ್ ಚಂದ್ರಶೇಖರ್ ಆರೋಪಿಸಿದ್ದರು.
ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯವು ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ಮುಖ್ಯ ಕಾರ್ಯದರ್ಶಿಯಿಂದ ವರದಿಯನ್ನು ಕೇಳಿತ್ತು. ಸತ್ಯೇಂದ್ರ ಜೈನ್ ತಮ್ಮ ಪ್ರಭಾವ ಬಳಸಿ ಜೈಲಿನಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಇತ್ತೀಚೆಗೆ ನ್ಯಾಯಾಲಯಕ್ಕೂ ತಿಳಿಸಿತ್ತು. ಇದೇ ಪ್ರಕರಣದಲ್ಲಿ ತಿಹಾರ್ ಜೈಲಿನಿಂದ ಸಂದೀಪ್ ಗೋಯಲ್ ಅವರನ್ನು ತೆಗೆದುಹಾಕಲಾಗಿತ್ತು.
ಇದನ್ನೂ ಓದಿ: ಎಎಪಿ ಸಚಿವರ ವಿರುದ್ಧ ಸುಕೇಶ್ ಚಂದ್ರಶೇಖರ್ ಆರೋಪದ ತನಿಖೆ: ತ್ರಿಸದಸ್ಯ ಸಮಿತಿಯಿಂದ ಎಲ್‌ಜಿಗೆ ವರದಿ ಸಲ್ಲಿಕೆ