ಗಾಂಧಿನಗರ: ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಮಿತಿ ರಚನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಹರ್ಷ ಸಾಂಘ್ವಿ ಶನಿವಾರ ತಿಳಿಸಿದ್ದಾರೆ.
ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆಯಾಗುವ ಸಾಧ್ಯತೆ ಇದೆ. ಈ ಹಿಂದೆ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ನಿರ್ಧಾರ ಪ್ರಕಟಿಸಿದ್ದವು. ಏಕರೂಪ ನಾಗರಿಕ ಸಂಹಿತೆಯು ಭಾರತದಲ್ಲಿನ ನಾಗರಿಕರ ವೈಯಕ್ತಿಕ ಕಾನೂನುಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ಒಂದು ಪ್ರಸ್ತಾಪವಾಗಿದೆ. ಇದು ನಾಗರಿಕರ ಧರ್ಮ, ಲಿಂಗ ಮತ್ತು ಲೈಂಗಿಕ ದೃಷ್ಟಿಕೋನವನ್ನು ಲೆಕ್ಕಿಸದೆ ಎಲ್ಲ ನಾಗರಿಕರಿಗೆ ಸಮಾನವಾಗಿ ಅನ್ವಯಿಸುತ್ತದೆ.
ಯುಸಿಸಿಯು ದೇಶದಲ್ಲಿ ಸಮಾನತೆ ತರುತ್ತದೆ ಎಂದು ಹೇಳಿದ ಅನೇಕ ರಾಜಕೀಯ ನಾಯಕರು ಅದನ್ನು ಬೆಂಬಲಿಸಿದ್ದಾರೆ. ಆದಾಗ್ಯೂ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಇದನ್ನು ಅಸಂವಿಧಾನಿಕ ಮತ್ತು ಅಲ್ಪಸಂಖ್ಯಾತರ ವಿರೋಧಿ ನಡೆ ಎಂದು ಬಣ್ಣಿಸಿದೆ.
ಬಿಜೆಪಿ ತನ್ನ 2019 ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಯುಸಿಸಿ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿತ್ತು. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಸೇರಿದಂತೆ ಯಾವುದೇ ಕಾನೂನನ್ನು ರೂಪಿಸಲು ಅಥವಾ ಜಾರಿಗೊಳಿಸುವಂತೆ ತಾನು ಸಂಸತ್ತಿಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಕೇಂದ್ರವು ಈ ತಿಂಗಳ ಆರಂಭದಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ನೀತಿಗೆ ಸಂಬಂಧಿಸಿದ ವಿಷಯವನ್ನು ಚುನಾಯಿತ ಪ್ರತಿನಿಧಿಗಳು ನಿರ್ಧರಿಸಬೇಕು ಮತ್ತು ಈ ನಿಟ್ಟಿನಲ್ಲಿ ಕೇಂದ್ರದಿಂದ ಯಾವುದೇ ನಿರ್ದೇಶನವನ್ನು ನೀಡಲಾಗುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿ: ಜೆಎನ್‌ಯು ಉಪಕುಲಪತಿ ಶಾಂತಿಶ್ರೀ