ನವದೆಹಲಿ: ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಗ್ಲಾ ಅವರು ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ನವೆಂಬರ್ 26 ಮತ್ತು 27ರಂದು ನೇಪಾಳಕ್ಕೆ ಭೇಟಿ ನೀಡಲಿದ್ದಾರೆ.
ನೇಪಾಳ ಸರ್ಕಾರ ಭಾರತದ ಭೂಪ್ರದೇಶಗಳನ್ನು ಒಳಗೊಂಡ ಹೊಸ ನಕ್ಷೆಯನ್ನು ನವೀಕರಿಸಿದ ಕೆಲವೇ ತಿಂಗಳುಗಳ ಬಳಿಕ ಈ ರಾಷ್ಟ್ರಕ್ಕೆ ಭೇಟಿ ನೀಡುತ್ತಿದ್ದಾರೆ.
ಭಾರತ ಮಾತ್ರ ನೇಪಾಳದ ಈ ನಕ್ಷೆಯನ್ನು ಒಪ್ಪಿಲ್ಲ ಮತ್ತು ಇದನ್ನು "ಕಾರ್ಟೊಗ್ರಾಫಿಕ್ ಪ್ರತಿಪಾದನೆ" ಎಂದು ಕರೆದಿದೆ. ಭೇಟಿಯ ಸಮಯದಲ್ಲಿ ಈ ವಿಷಯವನ್ನು ಎತ್ತವುದು ಅಸಂಭವವಾಗಿದೆ. ಗಡಿ ಸಮಸ್ಯೆಗಳ ಬಗ್ಗೆ ಪ್ರತ್ಯೇಕ ಸಭೆಗಳು ನಂತರ ನಡೆಯಬಹುದು. ಮೂಲಗಳ ಪ್ರಕಾರ, ಇದು ಸೌಜನ್ಯಯುತ ಭೇಟಿಯಷ್ಟೇ ಎನ್ನಲಾಗಿದೆ.
ವಿದೇಶಾಂಗ ಸಚಿವಾಲಯ ಹೊರಡಿಸಿದ ಅಧಿಕೃತ ಹೇಳಿಕೆಯ ಪ್ರಕಾರ, "ಈ ಭೇಟಿಯು ಉಭಯ ದೇಶಗಳ ನಡುವಿನ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯಕ್ಕೆ ಅನುಗುಣವಾಗಿದೆ. ನೇಪಾಳದೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುವ ಸಲುವಾಗಿ ಭೇಟಿ ನೀಡಲಾಗುತ್ತಿದೆ."
ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ನೇಪಾಳ ನಡುವಿನ ದ್ವಿಪಕ್ಷೀಯ ಸಹಕಾರವು ಬಲಗೊಳ್ಳುತ್ತಿದೆ. ಹಲವಾರು ಪ್ರಮುಖ ಮೂಲಸೌಕರ್ಯಗಳು ಮತ್ತು ಗಡಿಯಾಚೆಗಿನ ಸಂಪರ್ಕ ಯೋಜನೆಗಳು ಭಾರತದ ನೆರವಿನೊಂದಿಗೆ ಪೂರ್ಣಗೊಂಡಿವೆ. ಈ ಭೇಟಿಯು ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಹೆಚ್ಚಿಸಲು ಒಂದು ಅವಕಾಶವಾಗಿದೆ ಎಂದು ವಿದೇಶಾಂಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.