ದಂತೇವಾಡ (ಛತ್ತೀಸ್ಗಢ): ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಛತ್ತೀಸ್ಗಢದ ದಂತೇವಾಡದಲ್ಲಿ ಜಿಲ್ಲಾಡಳಿತ ಲಾಕ್ಡೌನ್ ಹೇರಿದ್ದು, ಇಂತಹ ಸಂದರ್ಭದಲ್ಲೂ ಐದು ತಿಂಗಳ ಗರ್ಭಿಣಿಯಾಗಿರುವ ಡಿವೈಎಸ್ಪಿ ಮಾತ್ರ ರಸ್ತೆಗಿಳಿದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ದಂತೇವಾಡದ ಉಪ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಸಾಹು ಅವರು ಲಾಕ್ಡೌನ್ ಘೋಷಣೆಯಾದರೂ ಅನಗತ್ಯವಾಗಿ ಮನೆಗಳಿಂದ ಹೊರಬರುತ್ತಿರುವವರಿಗೆ ರಸ್ತೆಯಲ್ಲೇ ಅರಿವು ಮೂಡಿಸುತ್ತಿದ್ದಾರೆ. ಮಾಸ್ಕ್ ಹಾಕದೇ ವಾಹನ ಚಲಾಯಿಸುತ್ತಿರುವವರನ್ನು ಅಡ್ಡಗಟ್ಟಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಮುಂಬೈನಲ್ಲಿ 'ವ್ಯಾಕ್ಸಿನ್ ಮುಗಿದಿದೆ': ಫಲಕ ನೋಡಿ ಹಿಂದಿರುಗುತ್ತಿರುವ ಜನರು
ಕೋವಿಡ್ ಎರಡನೇ ಅಲೆಯ ಉಲ್ಬಣ ಹಾಗೂ ಸುಡು ಬಿಸಿಲಿನ ನಡುವೆ ಶಿಲ್ಪಾ ಸಾಹು ಅವರ ಕರ್ತವ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. "ನಾವು ರಸ್ತೆಯಲ್ಲಿದ್ದೇವೆ, ನೀವು ಸುರಕ್ಷಿತವಾಗಿರಲು ಮನೆಯಿಂದ ಹೊರಬರಬೇಡಿ. ದಯವಿಟ್ಟು ಇದನ್ನು ಅರ್ಥಮಾಡಿಕೊಳ್ಳಿ, ಲಾಕ್ಡೌನ್ ನಿಯಮಗಳನ್ನು ಪಾಲಿಸಿ" ಎಂದು ಶಿಲ್ಪಾ ಮನವಿ ಮಾಡುತ್ತಿದ್ದಾರೆ.
ಕೋವಿಡ್ ಸಾವು-ನೋವು ಹೆಚ್ಚಾದ ಕಾರಣ ದಂತೇವಾಡದಲ್ಲಿ ಏಪ್ರಿಲ್ 18 ರಿಂದ ಏ.27ರವರೆಗೆ ಲಾಕ್ಡೌನ್ ಜಾರಿಗೊಳಿಸಲಾಗಿದೆ.