ಕೈಮೂರ್ (ಬಿಹಾರ) : ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಬಿಹಾರದಲ್ಲಿ ಭಾರಿ ದುರಂತವೊಂದು ನಡೆದಿದೆ. ಸ್ನಾನಕ್ಕೆಂದು ಕೆರೆಗೆ ಹೋಗಿದ್ದ ನಾಲ್ವರು ಹೆಣ್ಣು ಮಕ್ಕಳು ಸೇರಿ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಕ್ಕಳ ಶವಗಳನ್ನು ಹೊರತೆಗೆಯಲಾಗಿದ್ದು, ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ.
ಕೈಮೂರ್ ಜಿಲ್ಲೆಯ ರಾಂಪುರ ಬ್ಲಾಕ್‌ನ ಧಾವ್‌ಪೋಖರ್ ಗ್ರಾಮದಲ್ಲಿ ಈ ಶೋಕ ಸಂಗತಿ ಸೋಮವಾರ ನಡೆದಿದೆ. ಮಕ್ಕಳು ನೀರಿನಲ್ಲಿ ಮುಳುಗಿದ್ದನ್ನು ಯಾರೋ ಕಂಡವರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿ ಐವರು ಮಕ್ಕಳ ಶವಗಳನ್ನು ಕೆರೆಯ ನೀರಿನಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಘಟನೆಯ ವಿವರ: ಧಾವ್‌ಪೋಖರ್ ಗ್ರಾಮದಲ್ಲಿ ಒಂದೆಡೆ ದೀಪಾವಳಿ ಸಂಭ್ರಮ ಮನೆಮಾಡಿತ್ತು. ಇನ್ನೊಂದೆಡೆ ಯಾರೂ ಊಹಿಸಲಾದ ಘಟನೆ ನಡೆದಿದೆ. ಗ್ರಾಮದ ಐವರು ಮಕ್ಕಳಾದ 12 ವರ್ಷದ ಅನ್ನುಪ್ರಿಯಾ, 10 ವರ್ಷದ ಅಂಶು ಪ್ರಿಯಾ, 9 ವರ್ಷದ ಅಪೂರ್ವ ಪ್ರಿಯಾ, 8 ವರ್ಷದ ಮಧುಪ್ರಿಯಾ ಮತ್ತು 11 ವರ್ಷದ ಅಮನ್ ಕುಮಾರ್ ಅವರ ಜೊತೆಗೂಡಿ ಊರಿನಾಚೆಯ ಕೆರೆಗೆ ಸ್ನಾನಕ್ಕೆಂದು ಹೋಗಿದ್ದಾರೆ.
ಯಾರಿಗೂ ಈಜು ಬರುತ್ತಿರಲಿಲ್ಲ ಎಂದು ಹೇಳಲಾಗಿದ್ದು, ಕೆರೆಯ ನೀರಿಗೆ ಇಳಿದಾಗ ಐವರು ಮುಳುಗಿದ್ದಾರೆ. ಮಕ್ಕಳು ನೀರಿನಲ್ಲಿ ಮುಳಗಿದ್ದನ್ನು ನೆರೆಯ ಗ್ರಾಮದ ವ್ಯಕ್ತಿಯೊಬ್ಬರು ಕಂಡಿದ್ದು, ಜನರ ಸಹಾಯದಿಂದ ಐವರ ಶವಗಳನ್ನು ಹೊರತೆಗೆದಿದ್ದಾರೆ. ಈ ವಿಷಯ ಗ್ರಾಮದಲ್ಲಿ ಸಂಚಲನ ಉಂಟು ಮಾಡಿದೆ. ಕೆರೆಗೆ ಮಕ್ಕಳು ಹೋಗಿದ್ದದಾದರೂ ಹೇಗೆ ಮತ್ತು ಅಲ್ಲಿಗೆ ಆಟವಾಡಲು ಹೋಗಿದ್ದರೆ ಎಂಬ ಬಗ್ಗೆ ಪ್ರಶ್ನೆ ಮೂಡಿದೆ.
ಮಾಹಿತಿ ಪಡೆದ ಪೊಲೀಸರು ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ಸ್ಥಳಕ್ಕಾಗಮಿಸಿದ್ದಾರೆ. ಮಕ್ಕಳ ಮೃತದೇಹಗಳ ಮುಂದೆ ಕುಟುಂಬಸ್ಥರು ಕಣ್ಣೀರು ಸುರಿಸುತ್ತಿದ್ದಾರೆ. ಮೃತ ಮಕ್ಕಳೆಲ್ಲರೂ ಒಂದೇ ಗ್ರಾಮದವರಾಗಿದ್ದು, ಪೊಲೀಸರು ಮಾಹಿತಿ ಪಡೆದುಕೊಂಡು ಪಂಚನಾಮೆ ನಡೆಸಿದ್ದಾರೆ. ಬಳಿಕ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭಭುವಾ ಸದರ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಕ್ಕಳ ಸಾವಿನ ಬಗ್ಗೆ ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.
ಭಬುವಾ ಜಿಲ್ಲಾ ಕೌನ್ಸಿಲ್ ಸದಸ್ಯ ವಿಕಾಸ್ ಸಿಂಗ್ ಮಾತನಾಡಿ, ಮಕ್ಕಳೆಲ್ಲರೂ ಕೆರೆಗೆ ಸ್ನಾನಕ್ಕೆ ತೆರಳಿದ್ದಾರೆ. ಅಲ್ಲಿ ನೀರಿಗೆ ಇಳಿದಾಗ ಮುಳುಗಿ ಎಲ್ಲಾ ಮಕ್ಕಳು ಸಾವನ್ನಪ್ಪಿದ್ದಾರೆ. ಈ ಬಗ್ಗೆ ನೆರೆಯ ಗ್ರಾಮಸ್ಥರು ಮಾಹಿತಿ ನೀಡಿದರು. ಪೊಲೀಸರು ಮೃತದೇಹದ ಪಂಚನಾಮೆ ನಡೆಸಿ, ಮರಣೋತ್ತರ ಪರೀಕ್ಷೆಗಾಗಿ ಭಭುವಾ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಪಟಾಕಿ ಅವಘಡ: ಬೆಂಗಳೂರಲ್ಲಿ ಗಾಯಗೊಂಡು 25 ಮಂದಿ ಆಸ್ಪತ್ರೆಗೆ ದಾಖಲು