ಜರ್ಸುಗುಗ(ಒಡಿಶಾ): ಒಡಿಶಾ ಆರೋಗ್ಯ ಸಚಿವ ನಬಾ ದಾಸ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಅಸಿಸ್ಟೆಂಟ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾರಿಸಿದ ಗುಂಡು ಸಚಿವರ ಎದೆ ಹೊಕ್ಕಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಸಚಿವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬ್ರಜರಾಜನಗರಕ್ಕೆ ತೆರಳುತ್ತಿದ್ದಾಗ ದಾಳಿ ನಡೆದಿದೆ.
ನಬಾ ದಾಸ್ ಅವರು ವಾಹನದಿಂದ ಇಳಿಯುತ್ತಿದ್ದಾಗ ಅಪರಿಚಿತ ಪೊಲೀಸ್ ಅಧಿಕಾರಿ ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಂಡಿನ ದಾಳಿಯ ಹಿಂದಿನ ನಿಖರವಾದ ಕಾರಣ ತಿಳಿದುಬಂದಿಲ್ಲ. ರಕ್ತದ ಮಡುವಿನಲ್ಲಿ ಬಿದ್ದಿದ್ದ ದಾಸ್ರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಗುಂಡಿನ ದಾಳಿಯ ನಂತರ ಬಿಜೆಡಿ ಕಾರ್ಯಕರ್ತರು ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದು, ಘಟನಾ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ.
ಆಕ್ರೋಶ: ಸಚಿವರ ಮೇಲೆ ಅತ್ಯಂತ ಸಮೀಪದಿಂದ ಗುಂಡು ಹಾರಿಸಲಾಗಿದ್ದು, ಗುಂಡಿನ ದಾಳಿ ಪೂರ್ವಯೋಜಿತ ಎಂದು ಶಂಕಿಸಲಾಗಿದೆ. ಪೊಲೀಸ್ ಬೆಂಗಾವಲನ್ನೂ ಬೇಧಿಸಿ ಗುಂಡು ಹಾರಿಸಿರುವುದು ಕಳವಳಕಾರಿ. ಇದು ಭದ್ರತಾ ಲೋಪ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಿಜು ಜನತಾ ದಳದ (ಬಿಜೆಡಿ) ಹಿರಿಯ ನಾಯಕರಾದ ನಬಾ ದಾಸ್ ಇತ್ತೀಚೆಗೆ ಮಹಾರಾಷ್ಟ್ರದ ಪ್ರಸಿದ್ಧ ಶನಿ ಶಿಂಗ್ನಾಪುರ ದೇವಸ್ಥಾನಕ್ಕೆ 1 ಕೋಟಿ ರೂಪಾಯಿ ಮೌಲ್ಯದ 1.7 ಕೆಜಿ ಚಿನ್ನ ಮತ್ತು 5 ಕೆಜಿ ಬೆಳ್ಳಿಯಿಂದ ಮಾಡಿದ ಕಳಸವನ್ನು ದಾನ ಮಾಡಿ ಸುದ್ದಿಯಾಗಿದ್ದರು. ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ವಿಜಯಪುರ: ಮೂರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ