ಲಖನೌ: ಬಾಲಿವುಡ್ ನಟ ಶಾರುಖ್ ಖಾನ್ ಅವ ಪತ್ನಿ ಗೌರಿ ಖಾನ್ ವಿರುದ್ಧ ಇಲ್ಲಿನ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೌರಿ ಖಾನ್ ರಾಯಭಾರತ್ವ ವಹಿಸಿದ್ದ ತುಳಸಿಯಾನಿ ಕಂಪನಿಯು ವ್ಯಕ್ತಿಯೊಬ್ಬರಿಗೆ ನಿಗದಿತ ಸಮಯದಲ್ಲಿ ಫ್ಲ್ಯಾಟ್ ನೀಡದ ಹಿನ್ನೆಲೆಯಲ್ಲಿ ಗ್ರಾಹಕರು ಗೌರಿ ಮತ್ತು ಕಂಪನಿಯ ನಿರ್ದೇಶಕರ ವಿರುದ್ಧ ದೂರು ನೀಡಿದ್ದಾರೆ.
ಮುಂಬೈನ ಅಂಧೇರಿ ಪೂರ್ವ ಪ್ರದೇಶದ ನಿವಾಸಿ ಕಿರಿತ್ ಜಸ್ವಂತ್ ಸಾಹ್ ಎಂಬುವರು ತುಳಸಿಯಾನಿ ಕಂಪನಿಯ ನಿರ್ಮಾಣದ ಬಹುಮಹಡಿ ಕಟ್ಟಡದಲ್ಲಿ ಫ್ಲ್ಯಾಟ್ ಖರೀದಿಸಿದ್ದರು. ಇದಕ್ಕಾಗಿ ಅವರು 86 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದರು. ಕಂಪನಿ ನಿರ್ಮಿಸುತ್ತಿರುವ ಟೌನ್ಶಿಪ್ಗೆ ಶಾರೂಖ್ ಖಾನ್ ಅವರ ಪತ್ನಿ ಗೌರಿ ಖಾನ್ ರಾಯಭಾರಿಗಳಾಗಿದ್ದಾರೆ.
ಗ್ರಾಹಕ ಕಿರಿತ್ ಜಸ್ವಂತ್ ಸಾಹ್ ಪ್ರಕಾರ, 2015 ರಲ್ಲಿ ಗೌರಿ ಖಾನ್ ಅವರು ಲಖನೌದ ತುಳಸಿಯಾನಿ ಕಂಪನಿಯ ಪ್ರಚಾರ ಮಾಡುವುದನ್ನು ನೋಡಿದ್ದೆ. ಅದರಲ್ಲಿ ತುಳಸಿಯಾನಿ ಕಂಪನಿಯು ಸುಶಾಲ್ ಗಾಲ್ಫ್ ಸಿಟಿ ಪ್ರದೇಶದಲ್ಲಿ ಗಾಲ್ಫ್ ವ್ಯೂ ಎಂಬ ಹೆಸರಿನಲ್ಲಿ ಟೌನ್ಶಿಪ್ ನಿರ್ಮಾಣ ಮಾಡುತ್ತಿದೆ ಎಂದು ಪ್ರಚಾರ ಮಾಡಲಾಗಿತ್ತು. ಈ ಜಾಹೀರಾತು ನೋಡಿದ ನಂತರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕುಮಾರ್ ತುಳಸಿಯಾನಿ ಮತ್ತು ನಿರ್ದೇಶಕ ಮಹೇಶ್ ತುಳಸಿಯಾನಿ ಅವರನ್ನು ಸಂಪರ್ಕಿಸಿ ಒಂದು ಫ್ಲ್ಯಾಟ್ ಖರೀದಿಗೆ ಮಾತುಕತೆ ನಡೆಸಿದೆ.
ಅದರಂತೆ 86 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡೆ. 2015ರ ಆಗಸ್ಟ್‌ನಲ್ಲಿ ಫ್ಲಾಟ್‌ಗಾಗಿ ಬ್ಯಾಂಕ್‌ನಿಂದ ಸಾಲ ಪಡೆದು 85.46 ಲಕ್ಷ ರೂಪಾಯಿ ಪಾವತಿಸಿದೆ. ತುಳಸಿಯಾನಿ ಕಂಪನಿಯು 2016ರ ಅಕ್ಟೋಬರ್‌ನಲ್ಲಿ ಫ್ಲಾಟ್ ಹಸ್ತಾಂತರಿಸುವುದಾಗಿ ಭರವಸೆ ನೀಡಿತ್ತು. ನಂತರ ಕಂಪನಿಯು ನಿಗದಿತ ಸಮಯದೊಳಗೆ ನೀಡದ ಕಾರಣ 22.70 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಿತು. 6 ತಿಂಗಳಲ್ಲಿ ನಿವಾಸವನ್ನು ನೀಡುವುದಾಗಿ ಭರವಸೆ ಕೂಡ ನೀಡಿತ್ತು.
ಅಲ್ಲದೆ, ಇದರಲ್ಲಿ ವಿಫಲವಾದರೆ ಬಡ್ಡಿ ಸಮೇತ ಮೊತ್ತವನ್ನು ಹಿಂತಿರುಗಿಸುವುದಾಗಿಯೂ ಕಂಪನಿ ಹೇಳಿತ್ತು. ಈ ಮಧ್ಯೆ ಕಂಪನಿಯನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಇದರ ಒಪ್ಪಂದವೂ ಕೂಡ ಮುಗಿದಿದೆ. ತನ್ನ ಫ್ಲಾಟ್ ಸೇರಿ ಎಲ್ಲವನ್ನೂ ಇನ್ನೊಬ್ಬರಿಗೆ ಮಾರಾಟ ಮಾಡಲಾಗಿದೆ. ಇದರಿಂದ ತಮಗೆ ಲಕ್ಷಾಂತರ ರೂಪಾಯಿ ಮೋಸ ಉಂಟಾಗಿದೆ ಎಂದು ಗ್ರಾಹಕ ಕಿರಿತ್ ಜಸ್ವಂತ್ ಸಾಹ್ ಅವರು ಫೆಬ್ರವರಿ 25 ರಂದು ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ದೂರಿನ ಮೇರೆಗೆ ತುಳಸಿಯಾನಿ ಕಂಪನಿಯ ಅನಿಲ್ ಕುಮಾರ್ ತುಳಸಿಯಾನಿ, ಮಹೇಶ್ ತುಳಸಿಯಾನಿ ಮತ್ತು ಗೌರಿ ಖಾನ್ ವಿರುದ್ಧ ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸುಶಾಂತ್ ಗಾಲ್ಫ್ ಸಿಟಿ ಇನ್ಸ್‌ಪೆಕ್ಟರ್ ಶೈಲೇಂದ್ರ ಗಿರಿ ತಿಳಿಸಿದ್ದಾರೆ. ತನಿಖೆಯ ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:₹6,800 ಕೋಟಿ ವೆಚ್ಚದಲ್ಲಿ ಹೆಚ್‌ಎಎಲ್‌ನಿಂದ 70 ತರಬೇತಿ ವಿಮಾನ ಖರೀದಿಗೆ ಕೇಂದ್ರ ನಿರ್ಧಾರ