ಭೋಪಾಲ್ (ಮಧ್ಯಪ್ರದೇಶ): ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಜನರ ಭೀತಿಗೆ ಕಾರಣವಾದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್‌ನಾಥ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಕಮಲ್‌ನಾಥ್ ವಿರುದ್ಧ ಐಪಿಸಿ ಸೆಕ್ಷನ್ 188 ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 54 ರ ಅಡಿಯಲ್ಲಿ ಭೋಪಾಲ್‌ನ ಕ್ರೈಂ ಬ್ರ್ಯಾಂಚ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
"ಜಗತ್ತಿನಲ್ಲಿ ಹರಡಿರುವ ಕೊರೊನಾ ವೈರಸ್‌ನ ಭಾರತೀಯ ರೂಪಾಂತರವೆಂದು ಕರೆಯಲಾಗುತ್ತದೆ" ಎಂದು ಶನಿವಾರ ಉಜ್ಜಯಿನಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಹೇಳಿದ್ದಾರೆ ಎಂದು ಬಿಜೆಪಿ ಪೊಲೀಸರಿಗೆ ದೂರು ನೀಡಿತ್ತು.
ಇದನ್ನೂ ಓದಿ: 'ಇಂಡಿಯನ್ ವೆರಿಯಂಟ್' ವೈರಸ್ ಪದ ಅಳಿಸುವಂತೆ ಸೋಷಿಯಲ್ ಮೀಡಿಯಾಗಳಿಗೆ ಕೇಂದ್ರ ತಾಕೀತು
"ಚೀನಾದಿಂದ ಬಂದ ಕೊರೊನಾ ಈಗ ಭಾರತೀಯ ರೂಪಾಂತರ ಕೊರೊನಾ ಆಗಿದೆ. ಇಂದು, ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಕೋವಿಡ್ ಭಾರತೀಯ ರೂಪಾಂತರದ ಬಗ್ಗೆ ಭಯಪಡುತ್ತಿದ್ದಾರೆ. ಇದು ಯಾವ ಟೂಲ್‌ಕಿಟ್ ಆಗಿದೆ? ನಮ್ಮ ವಿಜ್ಞಾನಿಗಳು ಇದನ್ನು ಭಾರತೀಯ ರೂಪಾಂತರ ಎಂದು ಕರೆಯುತ್ತಿದ್ದಾರೆ. ಆದರೆ, ಬಿಜೆಪಿ ಸಲಹೆಗಾರರು ಮಾತ್ರ ಈ ವಿಚಾರವನ್ನು ಒಪ್ಪಿಕೊಳ್ಳುತ್ತಿಲ್ಲ" ಎಂದು ಕಮಲ್ ನಾಥ್ ಹೇಳಿದ್ದರು.