ನೋಯ್ಡಾ, ಉತ್ತರಪ್ರದೇಶ: ಇಲ್ಲಿನ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ತಯಾರಿಸುವ ಕಂಪನಿಯಲ್ಲಿ ಸೊಳ್ಳೆ ನಿವಾರಕ ಸ್ಪ್ರೇ ಸಿಂಪಡಿಸಿದ ಬಳಿಕ ಕೆಲಸ ಮಾಡುತ್ತಿದ್ದ 16 ಮಹಿಳಾ ಉದ್ಯೋಗಿಗಳು ಮೂರ್ಛೆ ಹೋಗಿ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಭಾನುವಾರ ನಡೆದಿದೆ. ಬಳಿಕ ಅವರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದ್ದಾರೆ.
ಭಾನುವಾರವಾದರೂ ಕಂಪನಿಯಲ್ಲಿ ಕೆಲಸ ನಡೆಸಲಾಗುತ್ತಿತ್ತು. ಈ ವೇಳೆ, ಆಡಳಿತ ಮಂಡಳಿ ಸೊಳ್ಳೆ ನಿವಾರಕ ಸ್ಪ್ರೇ ಸಿಂಪಡಣೆ ಮಾಡಿಸಿದ್ದಾರೆ. ಸ್ಪ್ರೇ ಮಾಡಿದ ಔಷಧದ ರಾಸಾಯನಿಕವು ಮಹಿಳಾ ಸಿಬ್ಬಂದಿ ಉಸಿರಾಡಿದ ಬಳಿಕ ಎಲ್ಲರೂ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ಕೆಲವರು ಕೆಮ್ಮು, ಉಸಿರಾಟ ತೊಂದರೆ ಅನುಭವಿಸಿ ನರಳಿದ್ದಾರೆ.
ಮೂರ್ಛೆ ಬಿದ್ದ ಎಲ್ಲ 16 ಮಹಿಳಾ ಸಿಬ್ಬಂದಿಯನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಳಿಕ ಕಂಪನಿಯಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಚಿಕಿತ್ಸೆ ನೀಡಿದ ಬಳಿಕ ಎಲ್ಲ ಮಹಿಳಾ ಸಿಬ್ಬಂದಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಪ್ರೇಯಲ್ಲಿನ ಹೆಚ್ಚಿನ ರಾಸಾಯನಿಕ ದೇಹ ಸೇರಿದ ಕಾರಣ ಮೂರ್ಛೆ ಬಿದ್ದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಷಯ ತಿಳಿದ ಮಹಿಳಾ ಸಿಬ್ಬಂದಿಯ ಕುಟುಂಬಸ್ಥರು ಕಂಪನಿ ಮುಂದೆ ಜಮಾಯಿಸಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಓದಿ: ಶೋಪಿಯಾನ್ನಲ್ಲಿ ಉಗ್ರನ ಹೊಡೆದುರುಳಿಸಿದ ಯೋಧರು: ಮುಂದುವರಿದ ಎನ್ಕೌಂಟರ್