ನವದೆಹಲಿ: ಮೂರು ಕೃಷಿ ಕಾನೂನುಗಳ ವಿರುದ್ಧ ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಮುಖಂಡರೊಂದಿಗೆ ಇಂದು ಕೇಂದ್ರ ಸರ್ಕಾರ ಒಂಬತ್ತನೇ ಸುತ್ತಿನ ಮಾತುಕತೆ ನಡೆಸಲಿದೆ.
ಸರ್ಕಾರ ಮತ್ತು ರೈತರ ನಡುವಿನ ಒಂಬತ್ತನೇ ಸುತ್ತಿನ ಮಾತುಕತೆ ಇಂದು 12 ಗಂಟೆಗೆ ವಿಜ್ಞಾನ ಭವನದಲ್ಲಿ ನಡೆಯಲಿದೆ. ಇದಕ್ಕೂ ಮೊದಲು, 8 ಸುತ್ತಿನ ಸಭೆ ನಡೆದಿದ್ದು, ಈ ವರೆಗೆ ಯಾವುದೇ ಯಶಸ್ಸು ಕಂಡು ಬಂದಿಲ್ಲ. ಕೃಷಿ ಕಾನೂನುಗಳ ಕುರಿತಾದ ಬಿಕ್ಕಟ್ಟನ್ನು ಕೊನೆಗೊಳಿಸಲು ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯ ಮೊದಲ ಸಭೆ ಜನವರಿ 19 ರಂದು ನಡೆಯುವ ಸಾಧ್ಯತೆಯಿದೆ. ಆದ್ದರಿಂದ ಇಂದು ಕೇಂದ್ರ ಸರ್ಕಾರ ಮತ್ತು ರೈತ ಸಂಘಗಳ ನಡುವೆ ನಡೆಯುವ ಈ ಸಭೆ ಹೆಚ್ಚು ಮಹತ್ವದ್ದಾಗಿದೆ.
ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ಕಳೆದ ಶುಕ್ರವಾರ 8 ನೇ ಸುತ್ತಿನ ಮಾತುಕತೆ ನಡೆದಿದ್ದು, ಅದೂ ಕೂಡ ವಿಫಲವಾಗಿದೆ. ಮೂರು ಕಾಯ್ದೆಗಳನ್ನು ಹಿಂಪಡೆದರೆ ಮಾತ್ರ ನಾವು ಮನೆಗಳಿಗೆ ಹಿಂದಿರುಗುತ್ತೇವೆ. ಇಲ್ಲವಾದಲ್ಲಿ, ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಸರ್ಕಾರಕ್ಕೆ ಪ್ರತಿಭಟನಾಕಾರರು ತಿಳಿಸಿದ್ದರು.