ಅಂಬಾಲಾ( ಹರಿಯಾಣ): ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ರೈತರ ಪ್ರತಿಭಟನೆ ಕುರಿತು ನೀಡಿದ್ದ ಹೇಳಿಕೆ ಖಂಡಿಸಿ ಅನ್ನದಾತರು ಬಿಜೆಪಿ ಎಂಎಲ್ಎ ಅಸೀಮ್ ಗೋಯಲ್ ನಿವಾಸಕ್ಕೆ ಮುತ್ತಿಗೆ ಹಾಕಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಧಾನಸಭೆಯಲ್ಲಿ ಅಸೀಮ್ ಗೋಯಲ್, ಕೃಷಿ ಕಾನೂನು ವಿರೋಧಿಸಿ ನಡೆಸುತ್ತಿರುವ ಹೋರಾಟದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಗೋಯಲ್ ಹೇಳಿಕೆ ಖಂಡಿಸಿರುವ ರೈತರ ಗುಂಪು ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಿದ್ದು, ಅವರ ನಿವಾಸದ ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ.
ಈ ನಡುವೆ ಮನೋಹರ್ ಲಾಲ್ ಖಟ್ಟರ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿಲುವಳಿ ಮಂಡನೆಗೆ ಸೋಲುಂಟಾಗಿದೆ. ಅವಿಶ್ವಾಸ ಮಂಡನೆ ಮಾಡಿ ಮಾತನಾಡಿದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ರೈತರ ಪ್ರತಿಭಟನೆಯಲ್ಲಿ ಸುಮಾರು 250 ಅನ್ನದಾತರು ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಗೋಯಲ್ ರೈತರ ಹೋರಾಟದ ವಿರುದ್ಧ ಹೇಳಿಕೆ ನೀಡಿದ್ದರು.
ಓದಿ: ಇಂದು ಉತ್ತರಾಖಂಡ ಸಂಪುಟ ವಿಸ್ತರಣೆ ಸಾಧ್ಯತೆ!
ಹೀಗಾಗಿ ರೈತರು ಶಾಸಕರ ನಿವಾಸ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದು, ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.