ಕರ್ನಾಲ್(ಹರಿಯಾಣ): ರೈತರು ಹರಿಯಾಣದ ಕರ್ನಾಲ್‌ನಲ್ಲಿ ಪ್ರತಿಭಟನೆ ಮುಂದುವರೆಸಿದ್ದು, ಶುಕ್ರವಾರ ತಡರಾತ್ರಿ ಸರ್ಕಾರಿ ಪ್ರತಿನಿಧಿಗಳೊಂದಿಗೆ ರೈತ ಸಂಘಟನೆಗಳು ಕರ್ನಾಲ್ನ ಮಿನಿ ಸೆಕ್ರೆಟರಿಯೇಟ್ನಲ್ಲಿ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಹರಿಯಾಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳ ಜೊತೆಗೆ ಸತತ ಮೂರು ಗಂಟೆಗಳ ಕಾಲ ಸಭೆ ನಡೆದಿದೆ. ಒಮ್ಮತಕ್ಕೆ ಬರದ ಹಿನ್ನೆಲೆಯಲ್ಲಿ ಶನಿವಾರ(ಇಂದು) ಬೆಳಗ್ಗೆ ಮತ್ತೆ ಸಭೆ ಆರಂಭಿಸಲು ನಿರ್ಧಾರ ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಗುರುನಮ್ ಸಿಂಗ್ ಚದುನಿ ಬೆಳಗ್ಗೆ ಮತ್ತೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಸರ್ಕಾರದಿಂದ ಕೆಲವು ಸಕಾರಾತ್ಮಕ ಫಲಿತಾಂಶಗಳನ್ನು ನಾವು ನಿರೀಕ್ಷಿಸುತ್ತೇವೆ ಎಂದಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ಹರಿಯಾಣ ಘಟಕದ ಮುಖ್ಯಸ್ಥ ರತನ್ ಮಾನ್ಸಿಂಗ್ ನಾವು ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ನಮ್ಮ ಬೇಡಿಕೆ ನಾಳೆ ಮತ್ತೊಮ್ಮೆ ಭೇಟಿಯಾಗುತ್ತೇವೆ. ಹಿಂದಿನ ಸಭೆಯಲ್ಲಿ ಸಕಾರಾತ್ಮಕ ಫಲಿತಾಂಶಗಳು ಸಿಕ್ಕಿವೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಭಾಗವಹಿಸುವುದಿಲ್ಲ. ಏಕೆಂದರೆ ಅವರು ಪ್ರಸ್ತುತ ಕರ್ನಾಲ್‌ನಲ್ಲಿ ಇಲ್ಲ ಎಂದು ರತನ್ ಮಾನ್ಸಿಂಗ್ ಹೇಳಿದ್ದಾರೆ. ಸರ್ಕಾರದ ಕಡೆಯಿಂದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಂದ್ರ ಸಿಂಗ್ ಮತ್ತು ಕರ್ನಾಲ್ ಉಪ ಆಯುಕ್ತ ನಿಶಾಂತ್ ಯಾದವ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಬಸ್- ಬೊಲೆರೋ ನಡುವೆ ಭೀಕರ ಅಪಘಾತ: ನಾಲ್ವರು ಮಹಿಳೆಯರು ಸಾವು, 12 ಮಂದಿಗೆ ಗಾಯ