ರೇವಾ(ಮಧ್ಯಪ್ರದೇಶ): ದಿನೇ ದಿನೆ ಕೋವಿಡ್ ಉಲ್ಭಣವಾಗುತ್ತಿದ್ದು, ಸಾವು ನೋವು ಹೆಚ್ಚುತ್ತಿದೆ. ಈ ನಡುವೆ ಮಧ್ಯಪ್ರದೇಶದ ರಾಕ್ರಿ ಗ್ರಾಮದ ರೈತ ಧರಂಜಯ್ ಸಿಂಗ್ (50) ಎಂಟು ತಿಂಗಳ ಕಾಲ ಕೊರೊನಾ ಸೇರಿದಂತೆ ತನ್ನ ಅನಾರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಿ, ಕೊನೆಗೂ ಕೈ ಚೆಲ್ಲಿ ಮಂಗಳವಾರ ರಾತ್ರಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ರೇವಾದ ರೈತ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರ ಚಿಕಿತ್ಸೆಗೆ 8 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಪೋಲೋದಲ್ಲಿ ಪ್ರತಿ ದಿನದ ಶುಲ್ಕವೇ ಬರೋಬ್ಬರಿ 3 ಲಕ್ಷ ರೂ.. ಇದಕ್ಕಾಗಿ ಕುಟುಂಬಸ್ಥರು ತಮ್ಮ 50 ಎಕರೆ ಜಮೀನನ್ನೂ ಮಾರಾಟ ಮಾಡಿದ್ದಾರೆ. 8 ಕೋಟಿ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಒದಗಿಸಿದರೂ ಜೀವ ಮಾತ್ರ ಉಳಿಸಿಕೊಳ್ಳಲಾಗಲಿಲ್ಲ.
2021ರ ಏಪ್ರಿಲ್ 30ರಂದು ಕೋವಿಡ್ ಟೆಸ್ಟ್
ರಾಕ್ರಿ ಗ್ರಾಮದ ನಿವಾಸಿ ಧರಂಜಯ್ ಸಿಂಗ್ (50) ಅವರಿಗೆ 2021ರ ಏಪ್ರಿಲ್ 30ರಂದು ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಮೇ 2 ರಂದು ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ಆರಂಭದಲ್ಲಿ ಅವರನ್ನು ರೇವಾದಲ್ಲಿರುವ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಏರುಪೇರಾಗಿ ಅವರನ್ನು ಐಸಿಯುಗೆ ದಾಖಲಿಸಲಾಯಿತು.
ನಂತರ ಬ್ರೈನ್ಗೆ ಸಂಬಂಧಿಸಿದಂತೆ ಸಮಸ್ಯೆಯಾಗಿ ವೆಂಟಿಲೇಟರ್ಗೆ ಹಾಕಬೇಕಾಯಿತು. ಪರಿಸ್ಥಿತಿ ಸುಧಾರಿಸದಿದ್ದಾಗ ಮೇ 18ರಂದು ಏರ್ ಆ್ಯಂಬುಲೆನ್ಸ್ ಮೂಲಕ ಚೆನ್ನೈಗೆ ಕರೆದೊಯ್ಯಲಾಯಿತು. ಅಂದಿನಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಅವರ ಶ್ವಾಸಕೋಸದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ನಾಲ್ಕು ದಿನಗಳ ನಂತರ ಕೊರೊನಾ ಸೋಂಕಿನಿಂದ ಗುಣಮುಖರಾದರು. ಶ್ವಾಸಕೋಶದ ಸೋಂಕಿನ ಹಿನ್ನೆಲೆ ಅವರಿಗೆ ಸುಮಾರು 8 ತಿಂಗಳ ಕಾಲ ಚಿಕಿತ್ಸೆ ನೀಡಲಾಯಿತು. ದೇಶ-ವಿದೇಶಗಳ ವೈದ್ಯರು ಚಿಕಿತ್ಸೆ ನೀಡಿದ್ದರೂ, ಯಶಸ್ಸು ಮಾತ್ರ ಕಾಣಲೇ ಇಲ್ಲ.
ಇದನ್ನೂ ಓದಿ: 60 ಅಧಿಕಾರಿಗಳು ಸೇರಿದಂತೆ 370 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸಂಕಟ.. ಮುಂಬೈ ಇಲಾಖೆಯಲ್ಲೇ ದಾಖಲೆ ಸಾವು!
ಸ್ಟ್ರಾಬೆರಿ ಮತ್ತು ಗುಲಾಬಿ ಕೃಷಿಯಿಂದ ರೈತ ಧರಂಜಯ್ ಸಿಂಗ್ ಸಾಕಷ್ಟು ಹೆಸರು ಮಾಡಿದ್ದರು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು 2021ರ ಜನವರಿ 26ರಂದು ಪಿಟಿಎಸ್ ಮೈದಾನದಲ್ಲಿ ಧರಂಜಯ್ ಅವರನ್ನು ಸನ್ಮಾನಿಸಿದ್ದರು. ಕೊರೊನಾ ಅವಧಿಯಲ್ಲಿ ಜನರ ಸೇವೆ ಮಾಡುವಾಗ ಧರಂಜಯ್ ಅವರಿಗೆ ಸೋಂಕು ತಗುಲಿತ್ತು. ಈ ಕುರಿತು ಕುಟುಂಬಸ್ಥರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಸರ್ಕಾರದಿಂದ 4 ಲಕ್ಷ ರೂ.ಗಳ ಧನ ಸಹಾಯ ಕೂಡಾ ದೊರೆತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.