ಅಯೋಧ್ಯೆ: ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡಿ ಮುಕ್ತ ನೀಡುತ್ತಿದ್ದ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಶರೀಫ್ ಅವರಿಗೆ 2020ರಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ. ಆದ್ರೆ ಇದುವರೆಗೆ ಪ್ರಶಸ್ತಿ ಅವರ ಕೈ ಸೇರಿಲ್ಲ.
ಇಲ್ಲಿಯವರೆಗೆ 25,000 ಕ್ಕೂ ಹೆಚ್ಚು ಅನಾಥ ಶವಗಳ ಅಂತ್ಯಕ್ರಿಯೆ ನಡೆಸಿರುವ ಉತ್ತರ ಪ್ರದೇಶದ ಫೈಜಾಬಾದ್ನ ಮೊಹಮ್ಮದ್ ಶರೀಫ್ ಅವರ ಸೇವೆ ಗುರುತಿಸಿ ಕೇಂದ್ರ ಸರ್ಕಾರ 2020ರ ಗಣರಾಜ್ಯೋತ್ಸವ ದಿನದಿಂದ ಪದ್ಮಶ್ರೀ ಘೋಷಣೆ ಮಾಡಿತ್ತು. ಕಳೆದ ಎರಡು ತಿಂಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿರುವ 83 ವರ್ಷದ ಮೊಹಮ್ಮದ್ ಶರೀಫ್ ಅವರು ಪ್ರಶಸ್ತಿಗಾಗಿ ಕಾಯುತ್ತಿದ್ದಾರೆ.
ಈ ಬಗ್ಗೆ ಅವರೇ ಖುದ್ದಾಗಿ ಮಾತನಾಡಿದ್ದಾರೆ. ತಮಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿರುವ ಸುದ್ದಿಯನ್ನ ಟಿವಿಯಲ್ಲಿ ನೋಡಿದ್ದೇನೆ. ಆದರೆ ಇಲ್ಲಿಯವರೆಗೆ ಅದು ತನಗೆ ಸಿಕ್ಕಿಲ್ಲ. ಸದ್ಯ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು, ಪ್ರಶಸ್ತಿ ಮೊತ್ತದಿಂದ ತಮ್ಮ ಚಿಕಿತ್ಸೆಗೆ ಸಹಾಯವಾಗಲಿದೆ ಎಂದು ಶರೀಫ್ ಹೇಳಿಕೊಂಡಿದ್ದಾರೆ.
ಯಾವುದೇ ಬೇಧ-ಭಾವ ಇಲ್ಲದೇ 27 ವರ್ಷಗಳ ಕಾಲ ಅನಾಥ ಶವಗಳಿಗೆ ಮುಕ್ತಿ ದೊರಕಿಸಿದ್ದಾರೆ. ಸದ್ಯ ಅವರು ಹಾಸಿಗೆ ಹಿಡಿದಿದ್ದು, ಚಿಕಿತ್ಸೆ ಹಣಕಾಸಿನ ಅಗತ್ಯವಿದೆ ಎಂದು ಶರೀಫ್ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಪದ್ಮಶ್ರೀಗೆ ಮೊಹಮ್ಮದ್ ಶರೀಫ್ ಅವರ ಹೆಸರನ್ನು ಕಳುಹಿಸಿದ್ದ ಬಿಜೆಪಿ ಸಂಸದ ಲಲ್ಲು ಸಿಂಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಅಗತ್ಯ ಎಲ್ಲ ಸಹಾಯವನ್ನು ಶರೀಫ್ ಅವರಿಗೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಇನ್ನು ಕಳೆದ ವರ್ಷ ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗೂ ಶರೀಫ್ ಅವರಿಗೆ ಆಹ್ವಾನ ನೀಡಲಾಗಿತ್ತು. ಆದ್ರೆ ಕೊರೊನಾ ಹಿನ್ನೆಲೆ 80 ವರ್ಷದ ವೃದ್ಧರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ.