ನವದೆಹಲಿ: ಕೋವಿಡ್-19 ವ್ಯಾಕ್ಸಿನೇಶನ್ಗಾಗಿ ಕೇಂದ್ರ ಸರ್ಕಾರ ಹಣ ಖರ್ಚು ಮಾಡಲು ಅವಕಾಶವಿಲ್ಲ ಎಂಬ ಮಾಧ್ಯಮಗಳ ವರದಿಗಳು ವಾಸ್ತವಿಕತೆಗೆ ದೂರವಾಗಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
35 ಸಾವಿರ ಕೋಟಿ ರೂಪಾಯಿ ವೆಚ್ಚವನ್ನು ಅನುದಾನ ಬೇಡಿಕೆಯ ಪಟ್ಟಿಗೆ ಸೇರಿಸಿ, ಈ ವೆಚ್ಚವನ್ನು "ರಾಜ್ಯಗಳಿಗೆ ವರ್ಗಾವಣೆ" ಎಂಬ ಶೀರ್ಷಿಕೆಯಡಿ ಹಣಕಾಸು ಸಚಿವಾಲಯ ತೋರಿಸಿದೆ. ಹೀಗೆ ಈ ಮೊತ್ತವನ್ನು ರಾಜ್ಯಗಳ ಅನುದಾನ ಬೇಡಿಕೆಯ ಪಟ್ಟಿಗೆ ಸೇರಿಸುವುದರಿಂದ ಹಲವಾರು ಆಡಳಿತಾತ್ಮಕ ಪ್ರಯೋಜನಗಳಿವೆ ಎಂದು ಸಚಿವಾಲಯ ಹೇಳಿದೆ.
ಆದರೆ, ರಾಜ್ಯಗಳಿಗೆ ವೆಚ್ಚದ ವರ್ಗಾವಣೆ ಎಂದು ಹೇಳಿದ್ದು ಕೇಂದ್ರ ಸರ್ಕಾರ ಯಾವುದೇ ವೆಚ್ಚ ಭರಿಸಲಾರದು ಎಂದರ್ಥವಲ್ಲ.
"ವಾಸ್ತವದಲ್ಲಿ ಲಸಿಕೆಗಳನ್ನು ಕೇಂದ್ರ ಸರ್ಕಾರದ ವತಿಯಿಂದ ಇದೇ ಖಾತೆಯ ಅಡಿಯಲ್ಲಿ ಖರೀದಿಸಿ, ಸಂಗ್ರಹಿಸಲಾಗುತ್ತಿದೆ. ಲಸಿಕೆಗಳ ಮೇಲೆ ಮಾಡಲಾಗುವ ವೆಚ್ಚವು ಸಾಮಾನ್ಯವಾಗಿ ಆರೋಗ್ಯ ಖಾತೆ ಪ್ರಾಯೋಜಿತ ಇತರ ವೆಚ್ಚಗಳಿಗಿಂತ ಭಿನ್ನವಾಗಿದೆ. ಹೀಗೆ ಪ್ರತ್ಯೇಕ ಖಾತೆಯ ಮೂಲಕ ಈ ವೆಚ್ಚವನ್ನು ಭರಿಸುವುದರಿಂದ ಹಲವಾರು ಆಡಳಿತಾತ್ಮಕ ಪ್ರಯೋಜನಗಳಿವೆ ಹಾಗೂ ಲಸಿಕಾಕರಣಕ್ಕೆ ಯಾವುದೇ ಅಡ್ಡಿಗಳಾಗದಂತೆ ಇದು ಅನುಕೂಲ ಮಾಡಿಕೊಡುತ್ತದೆ." ಎಂದು ಹಣಕಾಸು ಸಚಿವಾಲಯ ಹೇಳಿದೆ.
"ಈ ಶೀರ್ಷಿಕೆಯಡಿ ಲಸಿಕಾಕರಣಕ್ಕೆ ಆರೋಗ್ಯ ಖಾತೆಯಿಂದ ಅನುದಾನ ಮೀಸಲಿಡಲಾಗಿದೆ. ಈ ಮೂಲಕ ಲಸಿಕೆಗಳನ್ನು ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಅನುದಾನವೆಂದೇ ನೀಡಲಾಗುತ್ತದೆ. ಇಷ್ಟಾದರೂ ಈ ಯೋಜನೆಯನ್ನು ಸುಲಭವಾಗಿ ಮಾರ್ಪಡಿಸಲು ಅವಕಾಶ ಇಡಲಾಗಿದೆ." ಎಂದು ಹಣಕಾಸು ಸಚಿವಾಲಯ ಹೇಳಿದ್ದು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದೆ.