ನವದೆಹಲಿ: ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಐಸಿಸ್‌ನಿಂದ ಪ್ರೇರಿತವಾಗಿರುವ ಭಯೋತ್ಪಾದನೆಯು ಇಡೀ ಮಾನವಕುಲಕ್ಕೆ ಅಪಾಯಕಾರಿಯಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಮಂಗಳವಾರ ಹೇಳಿದ್ದಾರೆ. ಭಾರತ ಮತ್ತು ಇಂಡೋನೇಷ್ಯಾದಲ್ಲಿ ಸರ್ವಧರ್ಮ ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆಯ ಸಂಸ್ಕೃತಿ ಬೆಳೆಸುವಲ್ಲಿ ಉಲೇಮಾಗಳ ಪಾತ್ರದ ಕುರಿತು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಸಮಾವೇಶ ಉದ್ದೇಶಿಸಿ ದೋವಲ್ ಮಾತನಾಡಿದರು.
ಉಗ್ರವಾದ, ಮೂಲಭೂತವಾದ ಮತ್ತು ಧರ್ಮದ ದುರುಪಯೋಗದ ಯಾವುದೇ ಉದ್ದೇಶಗಳು ಯಾವುದೇ ನೆಲೆಯಲ್ಲಿ ಸಮರ್ಥನೀಯವಲ್ಲ. ಇದು ಧರ್ಮದ ವಿರೂಪವಾಗಿದ್ದು, ಅದರ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕಾಗಿದೆ. ಉಗ್ರವಾದ ಮತ್ತು ಭಯೋತ್ಪಾದನೆ ಇಸ್ಲಾಂನ ಅರ್ಥಕ್ಕೆ ವಿರುದ್ಧವಾಗಿವೆ. ಏಕೆಂದರೆ ಇಸ್ಲಾಂ ಎಂದರೆ ಶಾಂತಿ ಮತ್ತು ಯೋಗಕ್ಷೇಮ (ಸಲಾಮತಿ/ಅಸಲಾಂ). ಅಂಥ ಶಕ್ತಿಗಳನ್ನು ವಿರೋಧಿಸುವ ಕ್ರಮವನ್ನು ಯಾವುದೇ ಧರ್ಮದೊಂದಿಗೆ ಮುಖಾಮುಖಿ ಎಂದು ತಿಳಿಯಬಾರದು ಎಂದು ದೋವಲ್ ಪ್ರತಿಪಾದಿಸಿದರು.
ನಿಮ್ಮೆಲ್ಲರಿಗೂ ತಿಳಿದಿರುವಂತೆ, ನಮ್ಮ ಎರಡೂ ದೇಶಗಳು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಬಲಿಪಶುಗಳಾಗಿವೆ. ನಾವು ಸಾಕಷ್ಟು ಪ್ರಮಾಣದಲ್ಲಿ ಈ ಸವಾಲುಗಳನ್ನು ಜಯಿಸಿದ್ದರೂ, ಗಡಿಯಾಚೆಗಿನ ಮತ್ತು ಐಸಿಸ್ - ಪ್ರೇರಿತ ಭಯೋತ್ಪಾದನೆಯ ವಿದ್ಯಮಾನವು ಈಗಲೂ ಬೆದರಿಕೆಯಾಗಿ ಮುಂದುವರೆದಿದೆ.
ಐಸಿಸ್ ಪ್ರೇರಿತ ವೈಯಕ್ತಿಕ ಭಯೋತ್ಪಾದಕ ಸೆಲ್ಗಳು ಮತ್ತು ಸಿರಿಯಾ ಹಾಗೂ ಅಫ್ಘಾನಿಸ್ತಾನಗಳಿಂದ ಮರಳಿದ ಭಯೋತ್ಪಾದಕರಿಂದ ಎದುರಾಗುವ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾಗರಿಕ ಸಮಾಜದ ಸಹಕಾರ ಅತ್ಯಗತ್ಯ ಎಂದು ದೋವಲ್ ತಿಳಿಸಿದರು. ಸಹಿಷ್ಣುತೆ, ಸಾಮರಸ್ಯ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸುವಲ್ಲಿ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯುವ ಭಾರತೀಯ ಮತ್ತು ಇಂಡೋನೇಷ್ಯಾದ ಉಲೇಮಾ ಮತ್ತು ವಿದ್ವಾಂಸರನ್ನು ಒಟ್ಟುಗೂಡಿಸುವುದು ಚರ್ಚೆಯ ಉದ್ದೇಶವಾಗಿದೆ ಎಂದು ದೋವಲ್ ಹೇಳಿದರು.
ಇದು ಹಿಂಸಾತ್ಮಕ ಉಗ್ರವಾದ, ಭಯೋತ್ಪಾದನೆ ಮತ್ತು ಮೂಲಭೂತವಾದದ ವಿರುದ್ಧದ ಹೋರಾಟವನ್ನು ಬಲಪಡಿಸುತ್ತದೆ ಎಂದು ದೋವಲ್ ಹೇಳಿದರು.
ಇದನ್ನೂ ಓದಿ: ಪಿಎಫ್ಐ ಬ್ಯಾನ್: ಅಜಿತ್ ದೋವಲ್ ನೀಡಿದ ಮಾಹಿತಿಯೇ ಇದಕ್ಕೆ ಕಾರಣವೇ?