ನವದೆಹಲಿ: ದೇಶಿ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಅಭಾವ ತಗ್ಗಿಸಲು ಕೇಂದ್ರ ಸರ್ಕಾರವು ವಿದೇಶಗಳಿಗೆ ರಫ್ತಾಗುವ ಈರುಳ್ಳಿಗೆ ಶೇ.40ರಷ್ಟು ಸುಂಕ ವಿಧಿಸಿದೆ. ರಫ್ತು ಸುಂಕವನ್ನು ಡಿಸೆಂಬರ್ 31ರ ವರೆಗೆ ವಿಧಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರದ ಅಂಕಿ-ಅಂಶಗಳ ಪ್ರಕಾರ, ನವದೆಹಲಿಯಲ್ಲಿ ಶನಿವಾರ ಈರುಳ್ಳಿ ಚಿಲ್ಲರೆ ಮಾರಾಟ ದರ ಕೆ.ಜಿಗೆ 37 ರೂ ಇತ್ತು. ಈ ದರವು ಸೆಪ್ಟೆಂಬರ್ದಲ್ಲಿ ಏರಿಕೆ ಆಗುವ ಸಾಧ್ಯತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ರಫ್ತು ಮೇಲೆ ಸುಂಕ ಹೇರಲಾಗಿದೆ.
ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ 1ರಿಂದ ಆಗಸ್ಟ್ 4ರ ನಡುವೆ ದೇಶದಿಂದ 9.75 ಲಕ್ಷ ಟನ್ ಈರುಳ್ಳಿ ರಫ್ತು ಮಾಡಲಾಗಿದೆ. ಭಾರತದಿಂದ ಹೆಚ್ಚು ಈರುಳ್ಳಿ ಆಮದು ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ಬಾಂಗ್ಲಾದೇಶ, ಮಲೇಷ್ಯಾ ಹಾಗೂ ಯುಎಇ ಮೊದಲ 3 ಸ್ಥಾನಗಳಲ್ಲಿವೆ.
"ಮುಂದಿನ ದಿನಗಳಲ್ಲಿ ಹಬ್ಬಗಳು ಬರಲಿವೆ. ಈ ದೃಷ್ಟಿಯಿಂದ ದೇಶಿ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿಸಲು ರಫ್ತಿನ ಮೇಲೆ ಶೇ 40ರಷ್ಟು ಸುಂಕ ವಿಧಿಸಲು ಸರ್ಕಾರ ನಿರ್ಧರಿಸಿದೆ" ಎಂದು ಗ್ರಾಹಕರ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದರು.
ಅಖಿಲ ಭಾರತ ಮಟ್ಟದಲ್ಲಿ ಈರುಳ್ಳಿಗೆ ಸರಾಸರಿ ಚಿಲ್ಲರೆ ಬೆಲೆ ಶನಿವಾರ ಪ್ರತಿ ಕೆ.ಜಿಗೆ 30.72 ರೂ. ಇದೆ. ಗರಿಷ್ಠ ಬೆಲೆ ಕೆ.ಜಿಗೆ 63 ರೂ ಮತ್ತು ಕನಿಷ್ಠ 10 ರೂ.ಯಷ್ಟಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಜುಲೈ ತಿಂಗಳ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಪ್ರಕಾರ, ಈರುಳ್ಳಿ ಹಣದುಬ್ಬರವು ಜೂನ್‌ನಲ್ಲಿ ಶೇ 7.13ಕ್ಕೆ (-) ಶೇ 4.31ಕ್ಕೆ ಏರಿಕೆಯಾಗಿದೆ.
ಸರ್ಕಾರ ಈ ವರ್ಷ 3 ಲಕ್ಷ ಟನ್ ಈರುಳ್ಳಿ ಉಳಿಸಿಕೊಂಡಿದೆ. ಪ್ರಮುಖ ಸ್ಥಳಗಳಲ್ಲಿ ಕಳೆದ ವಾರದಿಂದ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ವಿಲೇವಾರಿ ಮಾಡಲು ಆರಂಭಿಸಿದೆ. ದೆಹಲಿ, ಅಸ್ಸಾಂ, ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಗಟು ಮಂಡಿಗಳಲ್ಲಿ 2,000 ಟನ್ ಬಫರ್ ಈರುಳ್ಳಿ ಮಾರಾಟವಾಗಿದೆ ಎಂದು ಗ್ರಾಹಕರ ವ್ಯವಹಾರಗಳ ಕಾರ್ಯದರ್ಶಿ ಹೇಳಿದರು.
ದಾಸ್ತಾನು ಈರುಳ್ಳಿಯನ್ನು ಸಾಮಾನ್ಯವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವಿನ ನೇರ ಅವಧಿಯಲ್ಲಿ, ಅಕ್ಟೋಬರ್ ತಿಂಗಳಲ್ಲಿ ತಾಜಾ ಬೆಳೆ ಬರುವವರೆಗೂ ಮಾರುಕಟ್ಟೆ ಸಮತೋಲನ ಕಾಪಾಡಿಕೊಳ್ಳಲು ಬಳಸಲಾಗುತ್ತದೆ. ವರ್ಷಾಂತ್ಯದಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣದಂತಹ ಪ್ರಮುಖ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಬಹುದು. ಇದಕ್ಕೆ ಕಡಿವಾಣ ಹಾಕುವ ಕಾರಣಕ್ಕೂ ಕೇಂದ್ರ ರಫ್ತು ಮೇಲೆ ನಿರ್ಬಂಧ ಜಾರಿಗೊಳಿಸಿದೆ.
ಇದನ್ನೂಓದಿ: ಕಾವೇರಿ ನೀರು ಹಂಚಿಕೆ ವಿವಾದ: ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸಂಪುಟ ಸಭೆ ತೀರ್ಮಾನ