ಕಾನ್ಪುರ(ಉತ್ತರ ಪ್ರದೇಶ): ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಸಂದರ್ಭವಾದ ಜನವರಿ 22ರಂದು ಸಿಸೇರಿಯನ್ ಹೆರಿಗೆ ಮಾಡುವಂತೆ ಹಲವಾರು ಗರ್ಭಿಣಿಯರು ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಮನವಿ ಮಾಡಿರುವುದಾಗಿ ವರದಿಯಾಗಿದೆ.
ಗಣೇಶ್ ಶಂಕರ್ ವಿದ್ಯಾರ್ಥಿ ಸ್ಮಾರಕ ವೈದ್ಯಕೀಯ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಉಸ್ತುವಾರಿ ಸೀಮಾ ದ್ವಿವೇದಿ ಮಾತನಾಡಿ, "ಒಂದು ಲೇಬರ್ ರೂಮ್‌ನಲ್ಲಿ 12ರಿಂದ 14 ಸಿಸೇರಿಯನ್ ಹೆರಿಗೆಗೆ ಲಿಖಿತ ಮನವಿಗಳನ್ನು ಸ್ವೀಕರಿಸಲಾಗಿದೆ. ಜನವರಿ 22ರಂದು 35 ಸಿಸೇರಿಯನ್ ಆಪರೇಷನ್‌ಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ" ಎಂದು ತಿಳಿಸಿದರು.
"ಗರ್ಭಿಣಿ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಹೆರಿಗೆ ದಿನಾಂಕಗಳು ಜನವರಿ 22ರ ಮೊದಲು ಅಥವಾ ನಂತರ ಕೆಲವು ದಿನಗಳಾಗಿದ್ದರೂ ಸಹ ಅಂದು ಮಂಗಳಕರ ದಿನವೆಂದು ಪರಿಗಣಿಸಿ ವೈದ್ಯರಿಗೆ ವಿನಂತಿ ಮಾಡಿದ್ದಾರೆ. ಅಂದು ಹೆರಿಗೆ ಆಗುವುದರಿಂದ ತಾಯಿ ಮತ್ತು ಮಗುವಿಗೆ ಉಂಟಾಗಬಹುದಾದ ತೊಡಕುಗಳು ನಿವಾರಣೆ ಆಗುತ್ತದೆ ಎಂಬ ನಂಬಿಕೆ ಅವರಲ್ಲಿ ಇದೆ" ಎಂದು ದ್ವಿವೇದಿ ಹೇಳಿದರು.
"ಭಗವಾನ್ ರಾಮನು ವೀರತೆ, ಸಮಗ್ರತೆ ಮತ್ತು ವಿಧೇಯತೆಯ ಸಂಕೇತ ಎಂದು ತಾಯಂದಿರು ನಂಬುತ್ತಾರೆ. ಆದ್ದರಿಂದ ದೇವಾಲಯದಲ್ಲಿ ಪ್ರಾಣ ಪ್ರತಿಷ್ಠೆಯ ದಿನದಂದು ಜನಿಸಿದ ಶಿಶುಗಳೂ ಸಹ ಅದೇ ಗುಣಗಳನ್ನು ಹೊಂದಿರುತ್ತಾರೆ ಎಂಬ ನಂಬಿಕೆ ಇದೆ" ಎಂದು ಅವರು ವಿವರಿಸಿದರು.
ಕಲ್ಯಾಣಪುರದ ನಿವಾಸಿ ಮಾಲ್ತಿ ದೇವಿ (26) ಮಾತನಾಡುತ್ತಾ, "ನನ್ನ ಹೆರಿಗೆ ದಿನಾಂಕ ಜನವರಿ 17ರಂದು ಇದೆ. ಆದರೆ, ಜನವರಿ 22 ಶುಭ ದಿನವಾದ ಹಿನ್ನೆಲೆಯಲ್ಲಿ ಅಂದು ಸಿಸೇರಿಯನ್ ಹೆರಿಗೆ ಮಾಡುವಂತೆ ಕಾನ್ಪುರ ಆಸ್ಪತ್ರೆಯ ವೈದ್ಯರಿಗೆ ವಿನಂತಿ ಮಾಡಿದ್ದೇವೆ. ರಾಮಮಂದಿರದಲ್ಲಿ ಬಾಲ ರಾಮನ ವಿಗ್ರಹದ ಪ್ರತಿಷ್ಠಾಪನೆ ದಿನದಂದು ನನ್ನ ಮಗು ಜನಿಸಬೇಕೆಂಬ ಆಸೆ ಇದೆ. ನನ್ನ ಮಗು ಯಶಸ್ಸು ಮತ್ತು ಕೀರ್ತಿಯೊಂದಿಗೆ ಬೆಳೆಯಲಿ ಎಂದು ನಾನು ಭಾವಿಸುತ್ತೇನೆ" ಎಂದರು.
ಇದನ್ನೂ ಓದಿ: ಎಲ್ಲಾ ಜೈಲುಗಳಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೇರಪ್ರಸಾರ : ಯುಪಿ ಕಾರಾಗೃಹ ಸಚಿವ
"ಶುಭ ಮುಹೂರ್ತದಲ್ಲಿ ಮಗು ಜನಿಸಿದರೆ ಅದು ಮಗುವಿನ ವ್ಯಕ್ತಿತ್ವದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಜನರು ನಂಬುತ್ತಾರೆ. ಕೆಲವೊಮ್ಮೆ ಧರ್ಮ ಮತ್ತು ಆಧ್ಯಾತ್ಮಿಕತೆಯು ವ್ಯಕ್ತಿಯ ಜೀವನದ ಒತ್ತಡಗಳನ್ನು ನಿಭಾಯಿಸಲು ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಲು ಶಕ್ತಿ ನೀಡುತ್ತದೆ" ಎಂದು ಮನಶ್ಶಾಸ್ತ್ರಜ್ಞ ದಿವ್ಯಾ ಗುಪ್ತಾ ತಿಳಿಸಿದ್ದಾರೆ.
ಇನ್ನು ರಾಮ ಮಂದಿರದ ಮೊದಲ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು, ಭಕ್ತರು ಪಾಲ್ಗೊಳ್ಳಲಿದ್ದಾರೆ.