ತೆಲಂಗಾಣ/ಛತ್ತೀಸ್ಗಢ: ತೆಲಂಗಾಣ ಮತ್ತು ಛತ್ತೀಸ್ಗಢ ಗಡಿಯ ಅರಣ್ಯಪ್ರದೇಶ ಮತ್ತು ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಪೊಲೀಸರು ಮತ್ತು ಮಾವೋವಾದಿಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳೆ ಸೇರಿದಂತೆ ಐವರು ನಕ್ಸಲರು ಹತರಾಗಿದ್ದು, ಒಬ್ಬ ಪೊಲೀಸ್ ಸಾವನ್ನಪ್ಪಿದ್ದಾರೆ.
ತೆಲಂಗಾಣ ಮತ್ತು ಛತ್ತೀಸ್ಗಢದ ಗಡಿಯ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಕೈಗೊಂಡಿದ್ದ ಕಾರ್ಯಾಚರಣೆ ವೇಳೆ ನಕ್ಸಲ್ ನಾಯಕಿ ಮುನ್ನಿ ಮತ್ತು ನಾಲ್ವರು ನಕ್ಸಲರು ಹತರಾಗಿದ್ದಾರೆ. ಗುಂಡಿನ ಚಕಮಕಿ ವೇಳೆ ಪೊಲೀಸ್ ಸಿಬ್ಬಂದಿ ತೀವ್ರ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಛತ್ತೀಸ್ಗಢದ ಬಿಜಾಪುರ ಮತ್ತು ತೆಲಂಗಾಣ ಭಾಗದ ಮುಲುಗು ಎಂಬಲ್ಲಿ ಮಾವೋವಾದಿ ನಾಯಕ ಸುಧಾಕರ್ ಮತ್ತು ಅವರ 40 ಬೆಂಬಲಿಗರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಡಿಆರ್ಜಿ ಮತ್ತು ಸಿಆರ್ಪಿಎಫ್ ಯೋಧರು ಜಂಟಿ ಕಾರ್ಯಾಚರಣೆಗೆ ಇಳಿದಿದ್ದರು. ಈ ವೇಳೆ ಸುಕ್ಮಾದ ಮಾರ್ಜೂಮ್ ಬೆಟ್ಟಗಳ ಮೇಲೆ ಅಡಗಿದ್ದ ಮಾವೋವಾದಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಮಾವೋವಾದಿಗಳು ಪ್ರತಿದಾಳಿಗೆ ಇಳಿದರು.
ತೀವ್ರ ಗುಂಡಿನ ಚಕಮಕಿಯಲ್ಲಿ ನಕ್ಸಲ್ ನಾಯಕಿಯಾದ ಮುನ್ನಿ ಗುಂಡೇಟಿಗೆ ಬಲಿಯಾಗಿದ್ದಾಳೆ. ಅಲ್ಲದೆ, ನಾಲ್ವರು ಮಾವೋವಾದಿಗಳು ಕೂಡ ಹತರಾಗಿದ್ದಾರೆ. ಈ ವೇಳೆ ನಕ್ಸಲ್ ಗುಂಡೇಟಿನಿಂದ ಡಿಆರ್ಜಿ ಪಡೆಯ ಪೊಲೀಸ್ ಕೂಡ ಮೃತಪಟ್ಟಿದ್ದಾನೆ.
ಮಾವೋವಾದಿಗಳ ಶವಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ನಕ್ಸಲರ ಹೆಡೆಮುರಿ ಕಟ್ಟಲು ಜಂಟಿ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಗಡಿಯಲ್ಲಿ ಬಿಗಿ ಭದ್ರತೆ: ಗಲಾಟೆ ಮಾಡಿ ಕರ್ನಾಟಕ ಪ್ರವೇಶ ಮಾಡುತ್ತಿರುವ ಪ್ರಯಾಣಿಕರು