ಕೊಡೆರ್ಮಾ (ಜಾರ್ಖಂಡ್): ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬುಲಂದ್ಶಹರ್ನ ಚಂಕಿ ರಾಹಿ ಎಂಬವರು ಸೇನೆಯನ್ನು ತೊರೆದ ನಂತರ 'ಸಿಂಗಲ್ ಯೂಸ್ ಪಾಲಿಥಿನ್ ಬ್ಯಾಗ್'ಗಳ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬೈಸಿಕಲ್ ಯಾತ್ರೆಯನ್ನು ಕೈಗೊಂಡಿದ್ದಾರೆ. ಜತೆಗೆ ಪರಿಸರ ಸಂರಕ್ಷಣೆಗಾಗಿ ಸಸಿಗಳನ್ನು ನೆಡುವಂತೆಯೂ ತಮ್ಮ ಯಾತ್ರೆಯಲ್ಲಿ ಜನರಿಗೆ ಮನವಿ ಮಾಡುತ್ತಿದ್ದಾರೆ. ಇವರು 18,000 ಕಿ.ಮೀ. ಕ್ರಮಿಸುವ ಗುರಿ ಹೊಂದಿದ್ದಾರೆ.
ಸೋಮವಾರ ಚಂಕಿ ರಾಹಿ ಅವರ ಸೈಕಲ್ ಯಾತ್ರೆ ಜಾರ್ಖಂಡ್‌ನ ಕೊಡೆರ್ಮಾವನ್ನು ತಲುಪಿದ್ದು, ಸ್ಥಳೀಯರು ಆತ್ಮೀಯವಾಗಿ ಸ್ವಾಗತಿಸಿಕೊಂಡಿದ್ದಾರೆ. ಚಾರ್ಧಾಮ್ ಸೇರಿದಂತೆ ಭಾರತದ 12 ಜ್ಯೋತಿರ್ಲಿಂಗಗಳ ದರ್ಶನ ಪಡೆಯಲು ಸೈಕಲ್ ಮೂಲಕ ಪ್ರವಾಸ ಹೊರಟಿರುವ ರಾಹಿ, ದೇವರ ಮೇಲಿನ ಭಕ್ತಿಯೊಂದಿಗೆ ಪ್ರಕೃತಿ ಮೇಲಿನ ಭಕ್ತಿಯನ್ನೂ ಸಾಕಾರಗೊಳಿಸಲು ಪಣ ತೊಟ್ಟಿದ್ದಾರೆ.
ತಮ್ಮ ಪರಿಸರ ಜಾಗೃತಿ ಯಾತ್ರೆಯ ಬಗ್ಗೆ ಮಾತನಾಡಿರುವ ರಾಹಿ, ಪಾಲಿಬ್ಯಾಗ್‌ಗಳನ್ನು ಬಳಸುವುದು ಬಿಟ್ಟು ಪರಿಸರ ಸಂರಕ್ಷಣೆಗೆ ಸಸಿಗಳನ್ನು ನೆಡಬೇಕು. ಏಕ ಬಳಕೆಯ ಪಾಲಿಥಿನ್ ಬ್ಯಾಗ್‌ಗಳ ಮೇಲೆ ಸರ್ಕಾರ ನಿಷೇಧ ಹೇರಿದೆ, ಆದರೆ ಜನರು ಬಳಸುವುದನ್ನು ಬಿಟ್ಟಾಗ ಮಾತ್ರ ಅಭಿಯಾನ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಸೆ. 12 ರಂದು ರಾಹಿ ಬೈಸಿಕಲ್ ಯಾತ್ರಯನ್ನು ಪ್ರಾರಂಭಿಸಿದ್ದು, ಇಲ್ಲಿಯವರೆಗೆ 4,000 ಕಿ. ಮೀ. ದೂರವನ್ನು ಕ್ರಮಿಸಿದ್ದಾರೆ. ಮುಂದಿನ ವರ್ಷ ಏಪ್ರಿಲ್ ವೇಳೆಗೆ ಉಳಿದ 14,000 ಕಿ. ಮೀ. ಕ್ರಮಿಸಿ, 12 ಜ್ಯೋತಿರ್ಲಿಂಗಗಳ ದರ್ಶನ ಪಡೆಯುವ ನಿರೀಕ್ಷೆಯಿದೆ. ಜಾರ್ಖಂಡ್‌ನ ಕೊಡೆರ್ಮಾಗೆ ತಲುಪಿರುವ ರಾಹಿ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ದಿಯೋಘರ್ ಜಿಲ್ಲೆಯ ಬೈದ್ಯನಾಥ ಧಾಮಕ್ಕೆ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ಕೇರಳ ಟು ಈಜಿಪ್ಟ್: ಮಂಗಳೂರು ಯುವಕನಿಂದ ಸೈಕಲ್ನಲ್ಲಿ ಪ್ರಯಾಣ