ಪಾಟ್ನಾ (ಬಿಹಾರ): ಮಾಜಿ ಮಿಸೆಸ್ ಇಂಡಿಯಾ ಮತ್ತು ಬಿಜೆಪಿ ಮೇಯರ್ ಅಭ್ಯರ್ಥಿ ಶ್ವೇತಾ ಝಾ ಅವರು ರೈಫಲ್ ಹಿಡಿದು ಪೋಸ್ ನೀಡಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಸಿಲುಕಿದ್ದಾರೆ. ಝಾ ಒಂದು ಛಾಯಾಚಿತ್ರದಲ್ಲಿ AK-47 ರೈಫಲ್ ಹಾಗೂ ಇನ್ನೊಂದರಲ್ಲಿ INSAS ರೈಫಲ್ ಹಿಡಿದಿದ್ದರು. ಛಾಯಾಚಿತ್ರಗಳು ವೈರಲ್ ಆದ ನಂತರ ಈ ರೈಫಲ್‌ಗಳನ್ನು ಆಕೆ ಹೇಗೆ ಪಡೆದುಕೊಂಡರು ಎಂಬ ಪ್ರಶ್ನೆ ಉದ್ಭವಿಸಿದೆ.
ವಿಷಯ ತಿಳಿದ ಪಾಟ್ನಾ ಪೊಲೀಸ್‌ನ ಆರ್ಥಿಕ ಅಪರಾಧ ಘಟಕ (ಇಒಯು) ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ. ಝಾ ಒಂದು ಅಥವಾ ಎರಡು ದಿನಗಳಲ್ಲಿ ಇಒಯು ಅಧಿಕಾರಿಗಳ ಮುಂದೆ ಹಾಜರಾಗುವ ನಿರೀಕ್ಷೆ ಇದೆ. ಬಿಹಾರದ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯೆ ಝಾ, ಕಳೆದ ವರ್ಷ ಮೇಯರ್ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಆಕೆಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೆಂದರೆ ಒಲವು ಎಂದು ಮೂಲಗಳು ತಿಳಿಸಿವೆ.
ಬಂದೂಕು ಸಂಸ್ಕೃತಿಗೆ ಕಡಿವಾಣ: ಹಿಂದೂ ಮುಖಂಡ ಸುಧೀರ್ ಸೂರಿ ಮತ್ತು ಡೇರಾ ಸಚ್ಚಾ ಸೌದಾ ಅನುಯಾಯಿ ಪ್ರದೀಪ್ ಸಿಂಗ್ ಹತ್ಯೆಯ ನಂತರ ಆಮ್ ಆದ್ಮಿ ಪಾರ್ಟಿ ನೇತೃತ್ವದ ಪಂಜಾಬ್ ಸರ್ಕಾರ ಎಚ್ಚೆತ್ತುಕೊಂಡಿತ್ತು. ಬಂದೂಕು ಸಂಸ್ಕೃತಿ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಸರ್ಕಾರ, ಹೊಸ ಬಂದೂಕು ಪರವಾನಗಿ ನೀಡುವುದನ್ನು ನಿಲ್ಲಿಸಿದೆ. ಅಷ್ಟೇ ಅಲ್ಲ, ಇದುವರೆಗೆ ನೀಡಿರುವ ಎಲ್ಲ ಅಸಲಿ ಪರವಾನಗಿಗಳನ್ನು ಮುಂದಿನ ಮೂರು ತಿಂಗಳಲ್ಲಿ ಪರಿಶೀಲಿಸುವಂತೆಯೂ ಆದೇಶ ಹೊರಡಿಸಲಾಗಿದೆ. ಪಂಜಾಬ್ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಈ ಅಧಿಸೂಚನೆಯನ್ನು ಹೊರಡಿಸಿದೆ ಮತ್ತು ಅದನ್ನು ಎಲ್ಲ ಜಿಲ್ಲೆಗಳಿಗೂ ರವಾನಿಸಲಾಗಿದೆ.
ಪಂಜಾಬ್ ಸಿಎಂ ಭಗವಂತ್ ಮಾನ್ ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆಯಲ್ಲಿ ಬಂದೂಕು ಸಂಸ್ಕೃತಿ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಇದುವರೆಗೆ ನೀಡಲಾದ ಎಲ್ಲಾ ಬಂದೂಕು ಪರವಾನಗಿಗಳನ್ನು ಸಂಪೂರ್ಣ ಪರಿಶೀಲಿಸುವಂತೆ ಸೂಚಿಸಲಾಗಿದೆ. ಇದರೊಂದಿಗೆ ಹೊಸ ಬಂದೂಕು ಪರವಾನಗಿ ನೀಡುವುದನ್ನು ಕೂಡ ನಿಷೇಧಿಸಲಾಗಿದೆ.
ಇದನ್ನೂ ಓದಿ: ಜಾಲತಾಣಗಳಲ್ಲಿ ಆಯುಧದೊಂದಿಗೆ ಫೋಟೋ ಹಾಕುವಂತಿಲ್ಲ: ಬಂದೂಕು ಸಂಸ್ಕೃತಿಗೆ ಕಡಿವಾಣ