ಧರ್ಮಪುರಿ (ತಮಿಳುನಾಡು): ಜಿಲ್ಲೆಯ ಪಾಲಕೋಡ್ ಎಂಬಲ್ಲಿ ಆನೆಯೊಂದು ಆಹಾರವನ್ನರಸಿ ಬಂದು ಬಾವಿಗೆ ಬಿದ್ದಿದ್ದು, ಅರಣ್ಯಾಧಿಕಾರಿಗಳಿಂದ ರಕ್ಷಣಾ ಕಾರ್ಯ ಮುಂದುವರೆದಿದೆ.
ಇಲ್ಲಿನ ಪಂಚಪಲ್ಲಿ ಎಲಕುಂದೂರು ಗ್ರಾಮದಲ್ಲಿ ಕಳೆದ ರಾತ್ರಿ ಆನೆಯೊಂದು ಬಾವಿಗೆ ಬಿದ್ದಿದೆ. ಗ್ರಾಮಸ್ಥ ವೆಂಕಟಾಚಲಂ ಎಂಬಾತ ಬೆಳಗ್ಗೆ ಬಾವಿ ಕಡೆ ತೆರಳಿದ್ದ ವೇಳೆ ಆನೆಯ ಕಿರುಚಾಟ ಕೇಳಿದ್ದಾರೆ. ಬಳಿಕ ಬಾವಿಗೆ ಇಣುಕಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಗ್ರಾಮಸ್ಥರು ಪಾಲಕೋಡ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.
ಬಾವಿ 50 ಅಡಿ ಆಳವಿದ್ದು, ಪ್ರಸ್ತುತ ಬಾವಿಯಲ್ಲಿ ನೀರಿಲ್ಲ. ಬಾವಿ ಬಳಿ ಇಳಿಜಾರಿನ ಮಾರ್ಗವನ್ನು ಸ್ಥಾಪಿಸುವ ಮೂಲಕ ಆನೆಯನ್ನು ರಕ್ಷಿಸಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಆನೆ ಪಂಚಪಲ್ಲಿ ಮೀಸಲು ಕಾಡಿನಿಂದ ಆಹಾರವನ್ನು ಹುಡುಕುತ್ತಾ ರಾತ್ರಿ ವೇಳೆ ಕಣ್ಣು ಕಾಣದೆ ಹತ್ತಿರದ ಬಾವಿಗೆ ಬಿದ್ದಿರಬಹುದು. ಸುಮಾರು 12ವರ್ಷದ ಹೆಣ್ಣಾನೆ ಎಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ.