ನವದೆಹಲಿ : ವಿಧಾನಸಭಾ ಚುನಾವಣೆ ನಡೆದ ರಾಜ್ಯಗಳಲ್ಲಿ ಮತ ಎಣಿಕೆ ಮೇ 2ರಂದು ನಡೆಯಲಿದೆ. ಈ ಪ್ರಕ್ರಿಯೆ ನಡೆದ ಬಳಿಕ ಕಾರ್ಯಕರ್ತರು ವಿಜಯೋತ್ಸವ ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟ ಆದೇಶ ನೀಡಿದೆ.
ಮೇ 2 ರಂದು ಅಸ್ಸೋಂ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮತ್ತು ಪುದುಚೇರಿಯಲ್ಲಿ ಮತ ಎಣಿಕೆ ನಡೆಯಲಿದೆ. ಈ ನಿಟ್ಟಿನಲ್ಲಿ ಸಮಗ್ರ ಆದೇಶ ಹೊರಡಿಸಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.
ರ್ಯಾಲಿ ನಡೆಸುವ ಸಂದರ್ಭದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆಯೇ ಎಂದು ಪ್ರಶ್ನಿಸಿ ಈ ಹಿಂದೆ ಮದ್ರಾಸ್ ಹೈಕೋರ್ಟ್, ಕೇಂದ್ರ ಚುನಾವಣಾ ಆಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
ಇದನ್ನು ಓದಿ: ಕೋವಿಡ್ ಪ್ರೋಟೋಕಾಲ್ ಉಲ್ಲಂಘನೆಯಾದ್ರೆ ಮತ ಎಣಿಕೆ ನಿಲ್ಲಿಸಲು ಆದೇಶ: ಮದ್ರಾಸ್ ಹೈಕೋರ್ಟ್ ಎಚ್ಚರಿಕೆ
ಚುನಾವಣಾ ಆಯೋಗದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ರಾಮಮೂರ್ತಿ ಅವರಿದ್ದ ನ್ಯಾಯಪೀಠವು, ಚುನಾವಣಾ ಆಯೋಗದ "ಬೇಜವಾಬ್ದಾರಿಯುತ" ವರ್ತನೆಗೆ ಕೊಲೆ ಆರೋಪಗಳಿಗೆ ವಿಧಿಸುವ ಶಿಕ್ಷೆ ವಿಧಿಸಬೇಕು ಎಂದು ಗರಂ ಆಗಿದೆ.
''ನಾವು ಇಂದು ಎದುರಿಸುತ್ತಿರುವ ಪರಿಸ್ಥಿತಿಗೆ ಕಾರಣವಾದ ಏಕೈಕ ಸಂಸ್ಥೆ ನೀವು (ಚುನಾವಣಾ ಆಯೋಗ)'' ಎಂದು ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿತು.