ನವದೆಹಲಿ: ಶಿವಸೇನೆ ಪಕ್ಷ ಯಾರಿಗೆ ಸೇರಬೇಕು ಎಂಬ ಹಗ್ಗಜಗ್ಗಾಟ ನಡೆಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಭಾರತದ ಚುನಾವಣಾ ಆಯೋಗ ಹೆಚ್ಚಿನ ಸದಸ್ಯ ಬಲ ಸಾಬೀತು ಮಾಡಲು ಸೂಚಿಸಿದೆ.
ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂದೆ ನೇತೃತ್ವದ ಯಾವ ಬಣ ಹೆಚ್ಚಿನ ಸದಸ್ಯ ಬಲ ಹೊಂದಿದ್ದಾರೆ ಎಂಬುದನ್ನು ತಿಳಿಯಲು ಬಯಸಿರುವ ಚುನಾವಣಾ ಆಯೋಗ, ಉಭಯ ಬಣಗಳು ಈ ಬಗ್ಗೆ ಆಗಸ್ಟ್ 8 ರೊಳಗೆ ಸಾಕ್ಷ್ಯ ಸಮೇತ ಮಾಹಿತಿ ನೀಡಬೇಕು ಎಂದಿದೆ.
ತಮ್ಮ ಬಣದಲ್ಲಿರುವ ಸಂಸದರು, ಶಾಸಕರ ಸಂಖ್ಯೆಯನ್ನಾಧರಿಸಿ ವರದಿ ನೀಡಲು ಹೇಳಿದೆ. ಬಳಿಕ ಅದು ಉಭಯ ಬಣಗಳು ನೀಡಿದ ವರದಿಯನ್ನು ಅದಲು ಬದಲು ಮಾಡಲಿದೆ. ಅಂದರೆ, ಏಕನಾಥ್ ಶಿಂದೆ ಬಣ ನೀಡಿದ ಪತ್ರವನ್ನು ಠಾಕ್ರೆ ಬಳಗಕ್ಕೆ, ಉದ್ಧವ್ ಠಾಕ್ರೆ ನೀಡಿದ ದಾಖಲೆಗಳನ್ನು ಶಿಂದೆ ಬಳಗಕ್ಕೆ ಕಳುಹಿಸಿಕೊಡಲಿದೆ. ಬಳಿಕ ಸದಸ್ಯ ಬಲದ ಆಧಾರದ ಮೇಲೆ ಪಕ್ಷದ ಹಿಡಿತವನ್ನು ಸಾಧಿಸಲಿದ್ದಾರೆ ಎಂದು ಹೇಳಲಾಗ್ತಿದೆ.
ಶಿವಸೇನೆಯ 52 ಶಾಸಕರು 18 ಸಂಸದರಲ್ಲಿ 40 ಶಾಸಕರು ಮತ್ತು 12 ಸಂಸದರು ಸಿಎಂ ಏಕನಾಥ್ ಶಿಂದೆ ಬಣ ಸೇರಿದ್ದಾರೆ. ಇದರಿಂದ ಅಲ್ಪಸಂಖ್ಯೆಗೆ ಇಳಿದಿರುವ ಉದ್ಧವ್ ಬಣ, 5 ಲಕ್ಷ ಕಾರ್ಯಕರ್ತರಿಗೆ ಪತ್ರ ಬರೆದು ಪಕ್ಷ ಉಳಿಸುವಂತೆ ಕೋರಿದೆ.
ಓದಿ: ಬಿಎಸ್‌ವೈ ನಿರಂತರ ಹೋರಾಟಗಾರರು, ಅವರು ನಿವೃತ್ತಿಯಾಗಲ್ಲ: ಸಿಎಂ ಬೊಮ್ಮಾಯಿ