ಮುಂಬೈ: ಆಟೋರಿಕ್ಷಾ ಓಡಿಸುತ್ತಿದ್ದವರು ಸರ್ಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂದು ವ್ಯಂಗ್ಯವಾಡಿದ್ದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಏಕನಾಥ್ ಶಿಂದೆ, ಮರ್ಸಿಡಿಸ್ ಕಾರನ್ನು ಸಾಮಾನ್ಯ ಆಟೋರಿಕ್ಷಾ ಮೀರಿಸಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೀವನೋಪಾಯಕ್ಕಾಗಿ ತಾವು ಈ ಹಿಂದೆ ಆಟೋ ರಿಕ್ಷಾ ಚಾಲಕನಾಗಿದ್ದೆ ಎಂಬ ಬಗ್ಗೆ ಹೆಮ್ಮೆ ಇದೆ. ಈಗ ಅದೇ ಆಟೋ ರಿಕ್ಷಾ ಚಾಲಕ ರಾಜ್ಯದ ಸಿಎಂ ಆಗಿದ್ದಾನೆ. ಭಾರಿ ಮೆರೆದಾಡುತ್ತಿದ್ದ ಮರ್ಸಿಡಿಸ್ ಕಾರನ್ನು ಮೀರಿಸಿದ್ದಾನೆ ಎಂದು ತಿವಿದರು.
ಇದು ಸಾಮಾನ್ಯ ಜನರ ಸರ್ಕಾರವಾಗಿದೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತದೆ. ಈ ಆಟೋ ರಿಕ್ಷಾ ಸರ್ಕಾರ ಬಡವರ ಪರವಾಗಿದೆ ಎಂಬುದನ್ನು ತೋರಿಸಿಕೊಡಲಾಗುವುದು ಎಂದು ಭರವಸೆ ಕೊಟ್ಟರು.
ಕಳೆದ ವಾರ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರದ ಪತನಕ್ಕೆ ಕನಿಷ್ಠ 40 ಶಾಸಕರೊಂದಿಗೆ ಸೇನಾ ನಾಯಕತ್ವದ ವಿರುದ್ಧ ಬಂಡಾಯವೆದ್ದ ಶಿಂಧೆ, ಬಂಡಾಯವನ್ನು ಮುನ್ನಡೆಸುತ್ತಿದ್ದಾಗ ಕೆಲವು ಸೇನಾ ನಾಯಕರು "ಆಟೋ ರಿಕ್ಷಾ ಚಾಲಕ" ಎಂದು ನಿಂದಿಸಿದ್ದರು.
ಶಿವಸೇನೆಯ ಉದ್ಧವ್ ಠಾಕ್ರೆ ವಿರುದ್ಧ 40 ಶಾಸಕರ ಜೊತೆಗೂಡಿ ಬಂಡೆದ್ದಿರುವ ಏಕನಾಥ್ ಶಿಂದೆ ಅವರು, ಬಿಜೆಪಿ ಬೆಂಬಲದಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಿಮಗಿಂತ ನಿಮ್ಮನ್ನಾಳುವ ರಾಜಕಾರಣಿಗಳ ಜೀವಿತಾವಧಿ ಹೆಚ್ಚು: ಸಂಶೋಧನೆ