ಮುಜಾಫರ್ನಗರ:(ಉತ್ತರಪ್ರದೇಶ): ದೇಶದಲ್ಲಿ ಮುಸ್ಲಿಮರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂಬ ಆಪಾದನೆಯ ಮಧ್ಯೆಯೇ ಉತ್ತರಪ್ರದೇಶದ ಮುಜಾಫರ್ನಗರ ಜಿಲ್ಲೆಯ ಮೀರತ್ನಲ್ಲಿ ಎರಡು ಮುಸ್ಲಿಂ ಕುಟುಂಬಗಳ ಎಂಟು ಜನರು ತಾವೇ ಸ್ವತಃ ಒಪ್ಪಿಕೊಂಡು ಹಿಂದು ಧರ್ಮವನ್ನು ಶಾಸ್ತ್ರೋಕ್ತವಾಗಿ ಸ್ವೀಕರಿಸಿದ್ದಾರೆ.
ಮೀರತ್ನ ಮುಸ್ಲಿಂ ಕುಟುಂಬದ 8 ಜನರು 'ಘರ್ ವಾಪಸಿ' ಆಗಿದ್ದಾರೆ. ಬಾಘ್ರಾದ ಯಶ್ವೀರ್ ಆಶ್ರಮದಲ್ಲಿ ನಡೆದ ಶುದ್ಧಿ ಯಜ್ಞದಲ್ಲಿ ಪಾಲ್ಗೊಂಡ ಮುಸ್ಲಿಂ ಕುಟುಂಬದವರಿಗೆ ಹಿಂದೂ ಧರ್ಮದ ಮರು ದೀಕ್ಷೆ ನೀಡಲಾಗಿದೆ. ಆಚಾರ್ಯ ಮೃಗೇಂದ್ರ ಬ್ರಹ್ಮಚಾರಿ ಅವರು ವೇದ ಮಂತ್ರಗಳನ್ನು ಪಠಿಸಿ ಘರ್ ವಾಪಸಿ ಮಾಡಿಕೊಂಡರು.
ಮತಾಂತರಗೊಂಡವರು ವಾಪಸ್: ಬಳಿಕ ಆಶ್ರಮದ ಮಹಂತ್ ಸ್ವಾಮಿ ಯಶ್ವೀರ್ ಮಹಾರಾಜ್ ಮಾತನಾಡಿ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಿಂದುಗಳನ್ನು ಅನ್ಯಮತಕ್ಕೆ ಮತಾಂತರ ಮಾಡಿದ್ದರು. ಕೆಲವು ಮೌಲಾನಾ, ಮೌಲ್ವಿಗಳು ಹಿಂದೂ ಧರ್ಮದ ಬಡ ಜನರಿಗೆ ಆಮಿಷ ಒಡ್ಡಿ ಮತ್ತು ಅಥವಾ ಇತರೆ ಮಾರ್ಗಗಳಿಂದ ಮುಸ್ಲಿಮರನ್ನಾಗಿ ಪರಿವರ್ತಿಸಿದ್ದಾರೆ. ಇದೀಗ ಅಂದು ಮತಾಂತರಗೊಂಡ ಜನರಲ್ಲಿ ಜಾಗೃತಿ ಮೂಡಿದೆ. ಇದರ ಫಲವಾಗಿ ಹಿಂದು ಧರ್ಮಕ್ಕೆ ವಾಪಸ್ ಆಗುತ್ತಿದ್ದಾರೆ ಎಂದು ಹೇಳಿದರು.
ಇಂದು ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಮರ 2 ಕುಟುಂಬದ 8 ಮಂದಿ ಶುದ್ಧಿ ಯಾಗದಲ್ಲಿ ಭಾಗವಹಿಸಿ, ಗಾಯತ್ರಿ ಮಂತ್ರವನ್ನು ಪಠಿಸುವ ಮೂಲಕ ಮತ್ತೆ ಹಿಂದೂ ಧರ್ಮವನ್ನು ಸೇರಿಕೊಂಡಿದ್ದಾರೆ ಎಂದು ತಿಳಿಸಿದರು.
ಹೆಸರು ಬದಲು: ಹಿಂದು ಧರ್ಮಕ್ಕೆ ವಾಪಸ್ಸಾದ 8 ಮಂದಿಯು ಮುಸ್ಲಿಂ ಹೆಸರನ್ನು ತೊರೆದು ಹಿಂದು ಧರ್ಮದ ಹೆಸರುಗಳನ್ನು ಪಡೆದುಕೊಂಡಿದ್ದಾರೆ. ಶಾಹಿಸ್ತಾ ಎಂಬ ಮಹಿಳೆಗೆ ರಾಧಾ ಎಂದು ಮರು ನಾಮಕರಣ ಮಾಡಿದರೆ, ಬರ್ಖಾ ಎಂಬಾಕೆಗೆ ವರ್ಷ, ರಶೀದಾಗೆ ಗೀತಾ, ಅಕ್ಬರ್ ಹೆಸರಿನ ವ್ಯಕ್ತಿಗೆ ಕೃತಪಾಲ್, ಇಕ್ರಾ ಬದಲಾಗಿ ಶೀತಲ್, ಗುಲ್ಲು ಎಂಬಾತನಿಗೆ ಕಾರ್ತಿಕ್, ಎಹ್ಸಾನ್‌ಗೆ ಸಚಿನ್ ಮತ್ತು ಹರೂನ್‌ಗೆ ಅರುಣ್ ಎಂದು ಹೆಸರಿಸಲಾಗಿದೆ.
ಇದನ್ನೂ ಓದಿ: ಮದುವೆ ಮನೆಯಲ್ಲಿ ಲಡ್ಡುಗಾಗಿ ಹೊಡೆದಾಟ.. ಠಾಣೆ ಮೆಟ್ಟಿಲೇರಿದ ವಧು - ವರನ ಕುಟುಂಬಸ್ಥರು!